ಗಂಗಾವತಿ:ರಾಜ್ಯದಲ್ಲಿ ಕೊರೊನಾ ಸೋಂಕು ಉಲ್ಭಣವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ವಾರಾಂತ್ಯದ ನಿಷೇಧಾಜ್ಞೆ ಜಾರಿ ಮಾಡಿದೆ. ಆದರೆ ಜಿಲ್ಲೆಯಲ್ಲಿ ಯಾವುದೇ ಜಾತ್ರೆ, ರಥೋತ್ಸವ ನಡೆಯದಂತೆ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಮಾಡಿದ್ದ ಆದೇಶವನ್ನು ನಗರದಲ್ಲಿ ಉಲ್ಲಂಘಿಸಲಾಗಿದೆ.
ನಗರದ ಆರಾಧ್ಯ ದೈವ ಚನ್ನಬಸವ ತಾತನ 75ನೇ ಪುಣ್ಯ ಸ್ಮರಣೆ ಅಂಗವಾಗಿ ಜ.15ರಂದು ನಡೆಯಲಿದ್ದ ಜಾತ್ರೆ ಮತ್ತು ರಥೋತ್ಸವವನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದರು. ಆದರೆ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿಯೂ ದೇವಸ್ಥಾನದ ಟ್ರಸ್ಟ್ ರಥೋತ್ಸವ ನಡೆಸಿದ ಘಟನೆ ನಡೆದಿದೆ.
ಪ್ರತಿ ವರ್ಷ ಸಂಜೆ ಗೋಧೂಳಿ ಸಮಯದಲ್ಲಿ ರಥೋತ್ಸವ ನಡೆಯುತ್ತಿತ್ತು. ಆದರೆ ಈ ಬಾರಿ ಬೆಳಗ್ಗೆ ಐದು ಗಂಟೆಗೆ ನೆರೆದ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಸಲಾಗಿದೆ. ತಾತನ ಮಠದ ಆವರಣದಲ್ಲಿ ಒಂದು ಸುತ್ತು ಗಾಲಿ ಉರುಳಿಸುವ ಮೂಲಕ ರಥೋತ್ಸವವನ್ನು ಸಾಂಪ್ರದಾಯಿಕವಾಗಿ ಮುಗಿಸಲಾಯಿತು ಎಂದು ಭಕ್ತರು ತಿಳಿಸಿದ್ದಾರೆ.
ನಿಷೇಧದ ಮಧ್ಯೆಯೂ ಅದ್ಧೂರಿಯಾಗಿ ನಡೆದ ಚನ್ನಬಸವ ತಾತನ ರಥೋತ್ಸವ ಈ ಮಧ್ಯೆ ಶನಿವಾರ ಭಾನುವಾರದ ವಾರಾಂತ್ಯದ ನಿಷೇಧಾಜ್ಞೆ ಜಾರಿಯಿದ್ದರೂ ಕೂಡ ಅಪಾರ ಪ್ರಮಾಣದಲ್ಲಿ ಭಕ್ತ ವೃಂದ ತಾತನ ಜಾತ್ರೆಗೆ ಹರಿದು ಬಂದಿತ್ತು. ಹೀಗಾಗಿ ತಾತನ ಮಠದ ಸುತ್ತಲೂ ಎಲ್ಲಿ ನೋಡಿದರೂ ಜನಸಂದಣಿ ಅಧಿಕವಾಗಿತ್ತು.
ಇದನ್ನೂ ಓದಿ:ದೇವನಹಳ್ಳಿಯ ಬೂದಿಗೆರೆ ಸರ್ಕಾರಿ ಶಾಲೆಯ 18 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು