ಗಂಗಾವತಿ (ಕೊಪ್ಪಳ): ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಇಲ್ಲಿನ ಗಾಂಧಿವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವೆಂಟಕೇಶ ಮಾದರಿ ವಿನಾಯಕನ ನಿಮಜ್ಜನ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಇದಕ್ಕೂ ಮೊದಲು ಗಣಪನಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದ ಬಳಿಕ ಶಾಸಕ ಜಿ. ಜನಾರ್ದನ ರೆಡ್ಡಿ ಗೋಧೂಳಿ ಮುಹೂರ್ತದಲ್ಲಿ ನಿಮಜ್ಜನ ಮೆರವಣಿಗೆಗೆ ಚಾಲನೆ ಕೊಟ್ಟರು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಬಳಿಕ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ, "ಯಾವುದೇ ಧರ್ಮದ ಹಬ್ಬಗಳು ಪರಸ್ಪರ ಸಮುದಾಯಗಳನ್ನು ಪ್ರೀತಿಯಿಂದ ಬೆಸೆಯುವಂತೆ ಮಾಡುತ್ತವೆ. ಹಬ್ಬ-ಹರಿದಿನಗಳನ್ನು ಎಲ್ಲರೂ ಸಂತಸದಿಂದ ಆಚರಿಸಬೇಕು. ಪರಸ್ಪರ ಸಮುದಾಯಗಳು ಭಾಗಿಯಾಗುವಂತೆ ಪ್ರೇರೇಪಿಸಬೇಕು. ಮುಖ್ಯವಾಗಿ ಯಾವುದೇ ಆಚರಣೆಗಳಿಂದ ಇನ್ನೊಬ್ಬರಿಗೆ ತೊಂದರೆಯಾಗದಂತೆ ನಾವು ಎಚ್ಚರಿಕೆ ವಹಿಸಬೇಕು" ಎಂದು ಸಲಹೆ ನೀಡಿದರು.
"ಇದೇ ಮೊದಲ ಬಾರಿಗೆ ಗಂಗಾವತಿ ನಗರದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಸೇರಿ ವಿನಾಯಕನ ಪ್ರತಿಷ್ಠಾಪನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥಪೂರ್ಣ ಹಬ್ಬದ ಆಚರಣೆಗೆ ಯೋಜನೆ ರೂಪಿಸಲಾಗುವುದು" ಎಂದರು. ಈ ಸಂದರ್ಭದಲ್ಲಿ ಕಿಷ್ಕಿಂಧಾ ಕಲ್ಯಾಣ ಗಜಾನನ ಸಮಿತಿಯಿಂದ ಸಾರ್ವಜನಿಕರಿಗೆ ವಿತರಿಸುವ ಉದ್ದೇಶದಿಂದ ತಯಾರಿಸಲಾಗಿದ್ದ 25 ಸಾವಿರ ಲಡ್ಡುಗಳನ್ನು ರೆಡ್ಡಿ ಸಾರ್ವಜನಿಕರಿಗೆ ವಿತರಣೆ ಮಾಡಿದರು.