ಬೆಂಗಳೂರು: ರಾಜಧಾನಿಯಲ್ಲಿ 100ರ ಅಂಚಿಗೆ ಪೆಟ್ರೋಲ್ ದರ ತಲುಪಿದ್ದು, 98.20 ರೂ. ಇದ್ದ ಪೆಟ್ರೋಲ್ ಬೆಲೆ 98.49 ರೂ ಗೆ ಬಂದು ತಲುಪಿದೆ. 91.12 ರೂ ಇದ್ದ ಡೀಸೆಲ್ ಬೆಲೆ 91.41 ರೂ.ಗೆ ಬಂದು ನಿಂತಿದೆ. ಹಲವು ಜಿಲ್ಲೆಗಳಲ್ಲಿ ಶತಕ ದಾಟಿ ಮುನ್ನಡೆದಿದೆ. ತೈಲ ಸೆಂಚುರಿಗೆ ಜನಸಾಮಾನ್ಯರು ಕಂಗಾಲಾಗಿದ್ದು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಪೆಟ್ರೋಲ್ ಬೆಲೆ ಏರಿಕೆ ಕುರಿತು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ ಏರಿಕೆಯ ಹಾದಿಯಲ್ಲಿರುವ ತೈಲ ಬೆಲೆ ರಾಜ್ಯದಲ್ಲೂ ಶತಕ ಬಾರಿಸಿ ಮುನ್ನಡೆದಿದೆ. ಬಳ್ಳಾರಿ, ಶಿರಸಿ ದಾವಣಗೆರೆಯಲ್ಲಿ 100 ರೂ. ಗಡಿ ದಾಟಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ಕೂಡ ಶತಕದ ಅಂಚಿಗೆ ಬಂದು ನಿಂತಿದೆ. ಬಳ್ಳಾರಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 100.08 ರೂ, ಶಿರಸಿಯಲ್ಲಿ 100.29 ರೂ, ದಾವಣಗೆರೆ 100.17 ರೂ ಗೆ ಏರಿಕೆಯಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಅನಿವಾರ್ಯ: ಬಳ್ಳಾರಿಯಲ್ಲಿ 99.80 ಪೈಸೆ ಇದ್ದ ದರ 28 ಪೈಸೆ ಏರಿಕೆಯಾಗಿ 100.08 ರೂ.ಗೆ ತಲುಪಿದೆ. ಶಿರಸಿಯಲ್ಲಿ ಕಳೆದ ವರ್ಷ ಈ ಸಮಯದಲ್ಲಿ 74.23 ರೂ. ಇದ್ದ ಬೆಲೆ 100.29ಕ್ಕೇರಿಕೆಯಾಗಿದೆ. ಇನ್ನುಳಿದ ಜಿಲ್ಲೆಗಳಲ್ಲೂ ಶತಕದ ಆಸುಪಾಸಿನಲ್ಲಿದ್ದು, ಅಲ್ಲೂ ಸಹ ಕೆಲವೇ ದಿನಗಳಲ್ಲಿ 100ರ ಗಡಿ ದಾಟಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗುತ್ತಿದೆ. ಹೀಗಾಗಿ ಇಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಅನಿವಾರ್ಯ ಎಂದು ತೈಲ ಕಂಪನಿಗಳು ಹೇಳುತ್ತಿವೆ. ಹಾಗೆಯೇ ಮೇ 4ರಿಂದ ಇಲ್ಲಿಯವರೆಗೆ 20 ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಲಾಗಿದೆ.
ದೇಶದ ಆರು ರಾಜ್ಯಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 21 ಪೈಸೆ, ಪ್ರತಿ ಲೀಟರ್ ಡೀಸೆಲ್‌ಗೆ 20 ಪೈಸೆ ಏರಿಕೆಯಾಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಲಡಾಖ್ ರಾಜ್ಯಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 100 ರೂ.ಗಳಿಗಿಂತ ಹೆಚ್ಚಾಗಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 101.25 ರೂ, ಪ್ರತಿ ಲೀಟರ್ ಡೀಸೆಲ್‌ಗೆ 93.30 ರೂ. ಆಗಿದೆ.
ಕಳೆದ ವರ್ಷ ಜೂ.6ಕ್ಕೆ ಪೆಟ್ರೋಲ್ ಲೀ.ಗೆ 74.93 ರೂ. ಇತ್ತು. ಒಂದೇ ವರ್ಷದಲ್ಲಿ 25.07 ರೂ. ಹೆಚ್ಚಳವಾಗಿದೆ. 2014ರಲ್ಲಿ 87 ರೂ.ಗೆ ಏರಿಕೆಯಾಗಿದ್ದು, ನಂತರ ಇಳಿಕೆಯಾಗಿತ್ತು. ಡೀಸೆಲ್ ಪ್ರತಿ ಲೀಟರ್‌ಗೆ 92.94 ಪೈಸೆ ದಾಖಲಾಗಿದೆ. ಸಾಗಣೆ ವೆಚ್ಚ ಅಧಿಕವಾಗುತ್ತಿದೆ ಎಂದು ಬಂಕ್ ಮಾಲೀಕರು ಹೇಳುತ್ತಿದ್ದು, ರಾಜಧಾನಿಯಲ್ಲಂತೂ ಜನಸಾಮಾನ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಲೆ ಗಗನಮುಖಿಯಾಗಿರೋದಕ್ಕೆ ಅಸಮಾಧಾನ : ಕೊಪ್ಪಳ ನಗರದಲ್ಲಿಯೂ ಪೆಟ್ರೋಲ್ ದರ ಲೀಟರ್‌ಗೆ ನೂರು ರೂಪಾಯಿ ಮುಟ್ಟುತ್ತಿದೆ. ನಗರದಲ್ಲಿ ಇಂದು ವಿವಿಧ ಪೆಟ್ರೋಲ್ ಬಂಕ್ ಗಳಲ್ಲಿ ಒಂದು ಲೀಟರ್ ಪೆಟ್ರೋಲ್ ಗೆ 100 ರುಪಾಯಿ ಮುಟ್ಟಿದೆ.
ಕೊಪ್ಪಳದಲ್ಲಿ ತೈಲ ಬೆಲೆ ಏರಿಕೆ ಕುರಿತು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಕೊಪ್ಪಳದ ಹೆಚ್‌ಪಿ ಪೆಟ್ರೋಲ್ ಬಂಕ್ ನಲ್ಲಿ ಲೀಟರ್ ಪೆಟ್ರೋಲ್ ಗೆ 99.45 ರೂಪಾಯಿ, ಡೀಸೆಲ್ 92.31 ರೂಪಾಯಿ, ರಿಲಾಯನ್ಸ್ ಬಂಕ್ ನಲ್ಲಿ ಪೆಟ್ರೋಲ್ 99.93 ರೂಪಾಯಿ, ಡೀಸೆಲ್ 92.49 ರೂ, ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ 99.39 ರೂ, ಡೀಸೆಲ್ 92.25 ರೂ ಹಾಗೂ ಭಾರತ್ ಪೆಟ್ರೋಲಿಯಂ ಬಂಕ್ ನಲ್ಲಿ ಪೆಟ್ರೋಲ್ 99.43 ಹಾಗೂ ಡೀಸೆಲ್ 92.29 ರೂಪಾಯಿ ದರವಿದೆ.
ಸಾಮಾನ್ಯರ ಬದುಕು ಮತ್ತಷ್ಟು ದುಸ್ತರ: ಕೊರೊನಾ ಸೋಂಕು ಹರಡುವಿಕೆ ಭೀತಿ, ಲಾಕ್ಡೌನ್ನಿಂದ ಜನರ ಕೈಗೆ ಕೆಲಸವಿಲ್ಲ, ಆದಾಯವಿಲ್ಲ. ಇಂತಹ ಸಂದರ್ಭದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಒಂದು ಲೀಟರ್‌ಗೆ ನೂರು ರೂಪಾಯಿ ಮುಟ್ಟುತ್ತಿದೆ. ಇದರ ಜೊತೆಗೆ ಅಗತ್ಯ ವಸ್ತುಗಳ ಬೆಲೆಗಳು ಸಹ ಗಗನಮುಖಿಯಾಗಿವೆ. ಇದರಿಂದಾಗಿ ಸಾಮಾನ್ಯ ಜನರ ಬದುಕು ಮತ್ತಷ್ಟು ದುಸ್ತರವಾಗುತ್ತಿದೆ. ಅಚ್ಚೇ ದಿನ್ ಬರುತ್ತದೆ ಎಂದು ಹೇಳುತ್ತಿದ್ದರು. ಆದರೆ ಇಂತಹ ಅಚ್ಛೆ ದಿನ್ ಬರುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ ಎಂದು ಸಾರ್ವಜನಿಕರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಓದಿ:ಲಸಿಕೆ ವಿತರಣೆಗೆ ಕೇಂದ್ರೀಕೃತ ವ್ಯವಸ್ಥೆ: ಪ್ರಧಾನಿ ಘೋಷಣೆಗೆ ಮುಖ್ಯಮಂತ್ರಿ ಸ್ವಾಗತ