ಕೊಪ್ಪಳ: ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡಿದ್ದು ಅನೇಕರ ಬದುಕು ದುಸ್ತರವಾಗಿದೆ. ಕೆಲ ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇಂತಹ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಮುಂದೆ ಬಂದಿದೆ.
ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ ಕೊಪ್ಪಳದ ಎಜಿಎಸ್ಕೆ ಸಂಸ್ಥೆಯ ಮಿಲೇನಿಯಂ ಶಾಲೆಯ ಆಡಳಿತ ಮಂಡಳಿಯುವರು ಈ ಸಮಾಜಮುಖಿ ನಿರ್ಧಾರ ಕೈಗೊಂಡಿದ್ದಾರೆ. ಕೊರೊನಾ ಸೋಂಕಿನಿಂದ ತಂದೆ-ತಾಯಿಯನ್ನು ಅಥವಾ ತಂದೆಯನ್ನು ಕಳೆದುಕೊಂಡು ಅನಾಥವಾಗಿರುವ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಿದ್ದಾರೆ.
ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದ ಬಳಿ ಇರುವ ಮಿಲೇನಿಯಂ ಶಾಲೆ ಸಿಬಿಎಸ್ಇ ಪಠ್ಯಕ್ರಮವನ್ನು ಹೊಂದಿದೆ. ಕೊರೊನಾ ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಅಥವಾ ತಂದೆಯನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ LKGಯಿಂದ SSLC ವರೆಗೆ ಉಚಿತ ಶಿಕ್ಷಣ ಲಭ್ಯವಾಗಲಿದೆ. ಸಮವಸ್ತ್ರ, ಪಠ್ಯಪುಸ್ತಕ, ನೋಟ್ ಬುಕ್ಸ್, ಕಲಿಕಾ ಸಾಮಗ್ರಿ, ಬಸ್ ಸೌಲಭ್ಯವನ್ನು ಸಹ ನೀಡಿ ಉಚಿತವಾಗಿ ಶಿಕ್ಷಣ ನೀಡಲಾಗುತ್ತದೆ.
ರಾಜ್ಯದ ಯಾವುದೇ ಭಾಗದ ಅನಾಥ ಮಕ್ಕಳಾದರೂ ಸಹ ಅವರಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ರಾಜ್ಯದ ಬೇರೆ ಬೇರೆ ಕಡೆಯಿಂದ ಮೂರ್ನಾಲ್ಕು ಜನರು ಕರೆ ಮಾಡಿ ವಿಚಾರಿಸಿದ್ದಾರಂತೆ. ಕೊರೊನಾ ಸೋಂಕಿನಿಂದ ಅನಾಥರಾದ ಮಕ್ಕಳಿಗೆ ನಮ್ಮಿಂದ ಒಂದಷ್ಟು ಸಹಾಯವಾಗಲಿ ಎಂಬ ಉದ್ದೇಶದಿಂದ ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥ ಗಿರೀಶ ಕಣವಿ.
ಉಚಿತ ಶಿಕ್ಷಣಕ್ಕಾಗಿ ಅನಾಥ ಮಕ್ಕಳನ್ನು ಸೇರಿಸಲು ಬಯಸುವವರು ಈ ಸಂಖ್ಯೆಗೆ ಕರೆ ಮಾಡಬಹುದು- 9448118985 -ಗಿರೀಶ್ ಕಣವಿ-ಸಂಸ್ಥೆಯ ಮುಖ್ಯಸ್ಥರು