ಕೊಪ್ಪಳ :ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದಲ್ಲಿ ನಾಲ್ವರು ಮಹಿಳೆಯರು ನಿನ್ನೆ ರಾತ್ರಿ ಹಳ್ಳದಲ್ಲಿ ಕೊಚ್ಚಿಹೋಗಿದ್ದು, ಇಂದು ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ಗಿರಿಜಮ್ಮ( 32), ಭುವನೇಶ್ವರಿ (40), ವೀಣಾ ಮಾಲಿಪಾಟೀಲ್ (19), ಪವಿತ್ರಾ (35) ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ : ಪ್ರತಿ ದಿನದಂತೆ ಇವರೆಲ್ಲ ಹತ್ತಿ ಬೀಜ ಸಂಸ್ಕರಣೆ ಮಾಡುವ ಕೆಲಸಕ್ಕೆ ತೆರಳಿದ್ದರು. ಶನಿವಾರ ಕೆಲಸ ಮುಗಿಸಿ ಮನೆಗೆ ಬರುವಾಗ ಭಾರಿ ಮಳೆಯಾಗಿದೆ. ಇದರಿಂದಾಗಿ ಸಂಕನೂರು ಗ್ರಾಮದ ಪಕ್ಕದಲ್ಲೇ ಇರುವ ಹಳ್ಳದಲ್ಲಿ ನೀರು ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಇವರನ್ನು ಕರೆದುಕೊಂಡು ಬಂದಿದ್ದ ವಾಹನ ಚಾಲಕ ಹಳ್ಳ ದಾಟಲು ಸಾಧ್ಯವಿಲ್ಲ ಎಂದು, ಅಲ್ಲಿಯೇ ಇಳಿಸಿ ಹೋಗಿದ್ದಾನೆ. ಈ ಸಂದರ್ಭದಲ್ಲಿ ಒಂದಿಷ್ಟು ಜನ ಕೂಲಿಕಾರ್ಮಿಕರು ಹಳ್ಳ ದಾಟಿದ್ದಾರೆ. ಆದರೆ ಭುವನೇಶ್ವರಿ, ಗಿರಿಜಾ, ಪವಿತ್ರಾ ಮತ್ತು ವೀಣಾ ಹಳ್ಳ ದಾಟಲು ಆಗದೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ಬೆಳಗ್ಗೆ ಈ ನಾಲ್ವರ ಶವಗಳು ಪತ್ತೆಯಾಗಿವೆ.