ಕೊಪ್ಪಳ: ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಅಕ್ರಮವಾಗಿ ಅಳವಡಿಸಿರುವ ಪಂಪ್‌ಸೆಟ್ ತೆರವಿಗೆ ಒತ್ತಾಯಿಸಿ ಕಾರಟಗಿ ತಾಲೂಕಿನ ಮೈಲಾಪುರ ಕಾಲುವೆ ಬಳಿ ನಾಲೆಯ ಕೆಳಭಾಗದ ಜಿಲ್ಲೆಯ ರೈತರು ಪ್ರತಿಭಟನೆ ನಡೆಸಿದರು.
ತುಂಗಭದ್ರಾ ಎಡದಂಡೆಯ ಮೇಲ್ಭಾಗದಲ್ಲಿ ಅಕ್ರಮವಾಗಿ ಪಂಪಸೆಟ್ ಅಳವಡಿಸಿ ನೀರು ಕಳ್ಳತನ ಮಾಡಲಾಗುತ್ತಿದೆ. ಇದರಿಂದ ಕೆಳಭಾಗದ ರೈತರಿಗೆ ನೀರು ಬರುತ್ತಿಲ್ಲ. ಪ್ರತಿಬಾರಿಯೂ ನಮಗೆ ಈ ಸಮಸ್ಯೆ ಎದುರಾಗುತ್ತದೆ. ಇದರಿಂದಾಗಿ ನಾವು ಬೆಳೆ ಬೆಳೆಯೋದು ಹೇಗೆ ಎಂದು ಪ್ರಶ್ನಿಸಿದರು.
ಅಕ್ರಮ ಪಂಪ್‌ಸೆಟ್ ತೆರವಿಗೆ ರೈತರ ಆಗ್ರಹ ಅಷ್ಟೇ ಅಲ್ಲದೆ ನಾಲೆಗೆ ಅಳವಡಿಸಲಾಗಿರುವ ಅಕ್ರಮ ಪಂಪ್ಸೆಟ್ಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಆಗ್ರಹಿಸಿದರು. ನಾಲೆಗೆ ಅಳವಡಿಸಿರುವ ಅಕ್ರಮ ಪಂಪ್ಸೆಟ್ಗಳನ್ನು ತೆರವುಗೊಳಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಆದರೂ ಸಹ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತರ ಹಾಗೂ ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.