ಕುಷ್ಟಗಿ(ಕೊಪ್ಪಳ): ಪರಿಷತ್ ಚುನಾವಣೆಯಲ್ಲಿ ಮಧ್ಯರಾತ್ರಿ ಮತದಾರರಿಗೆ ಹಣ ಹಂಚುವುದು ಕತ್ತಲ್ ರಾತ್ರಿ ಸಂಸ್ಕೃತಿ ಕಾಂಗ್ರೆಸ್ಸಿನದ್ದು ಎಂದೇ ಬಿಂಬಿತವಾಗಿದೆ. ಬಿಜೆಪಿ ಕೆಲಸ ಕಾರ್ಯಗಳನ್ನು ನೋಡಿ ಮತ ಚಲಾವಣೆಯಾಗಲಿದ್ದು, ನಮ್ಮ ಪಕ್ಷದಿಂದ ಬೆಳ್ಳಿ, ಬಂಗಾರ, ನಾಣ್ಯ ಇದ್ಯಾವುದು ಹಂಚಿಕೆಯಾಗಿಲ್ಲ. ಬಂಗಾರ ಕೊಟ್ಟರೆ ಇಲ್ಲ ಎನ್ನುವುದಿಲ್ಲ ತೆಗೆದುಕೊಳ್ತೇವೆ ಎಂದು ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಹೇಳಿದರು.
ಇಲ್ಲಿನ ಎ.ಎಚ್. ಪಲ್ಲೇದ್ ವಕೀಲರ ನಿವಾಸದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಅಭ್ಯರ್ಥಿ ಎಷ್ಟು ಖರ್ಚು ಮಾಡಬೇಕೋ ಅಷ್ಟನ್ನು ಖರ್ಚು ಮಾಡುವುದು ಅನಿವಾರ್ಯವಾಗಿದೆ. ಹಣ ಎಲ್ಲದಕ್ಕೂ ಕಾರಣವಾಗುವುದಿಲ್ಲ. ಹಾಗಾದರೆ ದುಡ್ಡು ಇರುವ ಟಾಟಾ, ಬಿರ್ಲಾ, ಅಂಬಾನಿ ದೇಶದ ಪ್ರಧಾನಿಯಾಗಬಹುದಿತ್ತು. ಚುನಾವಣೆಗಳಲ್ಲಿ ಜಾತಿ, ಆಮಿಷವೊಡ್ಡುವುದು ಕಾಂಗ್ರೆಸ್ಸಿನಲ್ಲಿದೆ. ಸ್ಪರ್ಧೆಯಲ್ಲಿರುವ ಜಾತಿಯವರ ಹಿಂದೆ ಹೋಗುವ ಅಪಾದನೆ ಹಾಲಪ್ಪ ಆಚಾರ್ ಅವರಿಗೂ ಇದೆ. ಮುಂದೆ ಯಾರಿಗಾದರೂ ಬರಬಹುದು ಎಂದರು.