ಕೊಪ್ಪಳ: ಎಲ್ಲ ವಿಷಯದಲ್ಲೂ ರಾಜಕಾರಣ ಮಾಡುವ ಕಾಂಗ್ರೆಸ್ನವರು ಡೋಂಗಿ ರಾಜಕಾರಣಿಗಳು ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ವ್ಯಂಗ್ಯವಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳದ ಬಿಜೆಪಿಯ ಸಂಸದರು, ಶಾಸಕರು ಡೋಂಗಿ ರಾಜಕಾರಣಿಗಳು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಇತ್ತೀಚಿಗೆ ಹೇಳಿಕೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜಕಾರಣ ಮಾಡಬಾರದು. ಆದರೆ ಎಲ್ಲ ವಿಷಯದಲ್ಲಿಯೂ ರಾಜಕಾರಣ ಮಾಡುತ್ತಿರುವ ಅವರೇ ಡೋಂಗಿ ರಾಜಕಾರಣಿಗಳು ಎಂದರು.
ದೊಡ್ಡನಗೌಡ ಪಾಟೀಲ್ ಸುದ್ದಿಗೋಷ್ಠಿ ಜನರು ಕೊರೊನಾದಿಂದ ತತ್ತರಿಸಿದ್ದಾರೆ. ಇಷ್ಟು ದಿನ ಇವರು ಎಲ್ಲಿದ್ದರು. ಇನ್ನು ಮಾಜಿ ಸಚಿವ ರಾಯರೆಡ್ಡಿ ಅವರು ಎರಡು ದಿನದ ಹಿಂದೆಯಷ್ಟೆ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರೊಂದು ರೀತಿ ಮಾತನಾಡುತ್ತಾರೆ. ಇನ್ನು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಅವರು ನಿರ್ಗತಿಕರಿಗೆ ಆಹಾರ ನೀಡುತ್ತಿರುವ ಕಾರ್ಯಕ್ಕೆ 8 ಸಾವಿರ ರೂಪಾಯಿ ಮಾತ್ರ ಕೊಟ್ಟಿದ್ದಾರೆ. ಆದರೆ, ನಾನೇ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ ಎಂದು ಆಪಾದಿಸಿದರು.
ಕೊರೊನಾ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ. ಮೋದಿ ಅವರು ತೆಗೆದುಕೊಂಡ ಕ್ರಮದ ಬಗ್ಗೆ ಇಡೀ ದೇಶದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಇತ್ತೀಚೆಗೆ ಸುರಿದ ಮಳೆಯಿಂದ ಬೆಳೆ ಹಾನಿ ಪರಿಹಾರ ವಿಚಾರದಲ್ಲಿ ಮಾಜಿ ಸಚಿವ ತಂಗಡಗಿ ಬಿಜೆಪಿಯವರು ಡೋಂಗಿ ರಾಜಕಾರಣಿಗಳು ಎಂದು ಹೇಳಿಕೆ ನೀಡಿದ್ದಾರೆ. ಮಳೆಗೆ ಜಿಲ್ಲೆಯ ಕನಕಗಿರಿ ಹಾಗೂ ಗಂಗಾವತಿ ಭಾಗದಲ್ಲಿ 20,891 ಹೆಕ್ಟೇರ್ ಭತ್ತದ ಬೆಳೆ ಹಾನಿಯಾಗಿದೆ. ಈ ಕುರಿತಂತೆ ಕೃಷಿ ಸಚಿವರು ಪರಿಶೀಲನೆ ನಡೆಸಿದ್ದರು. ನಾವೆಲ್ಲ ಸೇರಿ ಸಿಎಂ ಅವರನ್ನು ಭೇಟಿ ಮಾಡಿದಾಗ ಸಿಎಂ ಯಡಿಯೂರಪ್ಪ ಅವರು ಪರಿಹಾರಕ್ಕಾಗಿ 45 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಇಂತಹ ಆರ್ಥಿಕ ಸಂಕಷ್ಟದ ನಡುವೆಯೂ ಅವರು ರೈತರ ಮೇಲಿನ ಕಾಳಜಿಯಿಂದ ಹಣ ಬಿಡುಗಡೆ ಮಾಡಿದ್ದಾರೆ ಎಂದರು.