ಮಾಜಿ ಸಚಿವ ಪಿ ಜಿ ಆರ್ ಸಿಂಧ್ಯಾ ಕೊಪ್ಪಳ (ಗಂಗಾವತಿ) : ನೋವು ನೀಡುವುದು, ಆ ನೋವನ್ನು ಕಂಡು ಸಂತೋಷ ಪಡುವುದು ರಮೇಶ್ ಕುಮಾರ ಅವರಿಗೆ ಬಲು ಸಂತಸದ ವಿಷಯ ಎಂದು ಗೆಳಯನ ಬಗ್ಗೆ ಮಾಜಿ ಸಚಿವ ಪಿ. ಜಿ ಆರ್ ಸಿಂಧ್ಯಾ ಹೇಳಿದ್ದಾರೆ.
ಆರು ಬಾರಿ ಶಾಸಕ : ನಗರಕ್ಕೆ ಆಗಮಿಸಿದ್ದ ಅವರು ಗಂಗಾವತಿಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಲೋಕೋಭಿರಾಮವಾಗಿ ಮಾತನಾಡಿದರು. ಆರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಏಳನೇ ಬಾರಿಗೆ ಸ್ಪರ್ಧೆಯಲ್ಲಿ ಆಸಕ್ತಿ ಕಳೆದುಕೊಂಡೆ. ನಾನು ರಾಜಕೀಯ ಜೀವನದಲ್ಲಿ ಇದ್ದಷ್ಟು ಕಾಲ ಜನಸಾಮಾನ್ಯರಿಂದ ನನಗೆ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ, ನಮ್ಮವರೇ ನಮ್ಮ ಪಕ್ಷದಲ್ಲಿದ್ದವರೇ ನನಗೆ ಇನ್ನಿಲ್ಲದ ಹಿಂಸೆ ಕೊಟ್ಟರು ಎಂದರು.
ಆ ಚಿತ್ರ ಹಿಂಸೆ ನಮ್ಮವರ ಕಾಟ ತಾಳದೇ ರಾಜಕೀಯ ನಿವೃತ್ತಿಯಾಗಿದ್ದೇನೆ. ನನ್ನ ಕ್ಷೇತ್ರದಿಂದ ಏಳನೇ ಬಾರಿ ಸ್ಪರ್ಧೆಗೆ ಪಕ್ಷದ ಹಿರಿಯರು ಸೂಚನೆ ನೀಡಿದ್ದರು. ಆದರೆ, ಅದೃಷ್ಟವಶಾತ್ ಕ್ಷೇತ್ರ ವಿಂಗಡಣೆಯಾದ್ದರಿಂದ ನಮ್ಮಲ್ಲಿನ ಗೊಂದಲ ತಪ್ಪಿತ್ತು. ಇದಕ್ಕೂ ಮೊದಲೇ ನಾನು ರಾಜಕೀಯದಿಂದ ನಿವೃತ್ತಿಯಾಗ ಬಯಸಿದ್ದೆ ಎಂದು ಸಿಂಧ್ಯಾ ಗತ ಮೆಲುಕು ಹಾಕಿದರು.
ರಮೇಶ್ ಕುಮಾರ್ ನಾನು ಇಬ್ಬರು ಸಹಪಾಠಿಗಳು. ರಮೇಶನಿಗೆ ಸದಾ ಇನ್ನೊಬ್ಬರ ಕಾಲೆಳೆದು ಅವರ ಸಂಕಷ್ಟ ಕಂಡು ಮಜಾ ಅನುಭವಿಸುವುದು ಇವರಿಗೆ ಇನ್ನಿಲ್ಲದ ಸಂತಸ. ಇನ್ನೊಬ್ಬರನ್ನು ನೋಯಿಸುವುದೇ ಆತನಿಗೆ ಖುಷಿ. ರಾಜಕೀಯದಲ್ಲಿ ಈಗ 53ವರ್ಷ ಕಳೆದಿದ್ದಾರೆ ಎಂದು ಸಹಪಾಠಿಯ ಬಗ್ಗೆ ಸಿಂಧ್ಯಾ ಹೇಳಿದರು.
15 ಟನ್ ಅಕ್ಕಿ: ಮೂಡಬಿದರೆಯಲ್ಲಿ ಇತ್ತೀಚೆಗೆ ಆಯೋಜನೆ ಮಾಡಲಾಗಿದ್ದ ಸ್ಕೌಟ್ ಮತ್ತು ಗೈಡ್ಸ್ನ ಅಂತಾರಾಷ್ಟ್ರೀಯ ಜಾಂಬೂರಿ ಮೇಳಕ್ಕೆ ಗಂಗಾವತಿಯಿಂದ ಹದಿನೈದು ಟನ್ ಅಕ್ಕಿ (150 ಕ್ವಿಂಟಾಲ್) ಅಕ್ಕಿ ಕಳುಹಿಸಿ ಕೊಡುವಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸಿಂಧ್ಯಾ ಹೇಳಿದರು. ಮೂಡಬಿದರೆಯ ಆಳ್ವಾಸ್ ಕ್ಯಾಂಪಸ್ನಲ್ಲಿ ನಡೆದ ಸ್ಕೌಟ್ ಮತ್ತು ಗೈಡ್ ಸಂಸ್ಥೆಯ ಅಂತಾರಾಷ್ಟ್ರೀಯ ಜಾಂಬೂರಿ ಸಮ್ಮೇಳನದ ಯಶಸ್ವಿಗೆ ಎಲ್ಲ ನಿಟ್ಟಿನಿಂದಲೂ ಸಹಕಾರ ಸಿಕ್ಕಿದೆ. ಮುಖ್ಯವಾಗಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ಗಂಗಾವತಿಯ ನಾನಾ ದಾನಿಗಳ ನೆರವಿನಿಂದ 150 ಕ್ವಿಂಟಾಲ್ (ಹದಿನೈದು ಸಾವಿರ ಕೆಜಿ) ಅಕ್ಕಿ ಕಳುಹಿಸಲಾಗಿತ್ತು.
ನಾನಾ ದೇಶದಿಂದ ಒಟ್ಟು 62 ಸಾವಿರ ವಿದ್ಯಾರ್ಥಿಗಳು ಜಾಂಬೂರಿ ಮೇಳದಲ್ಲಿ ಭಾಗಿಯಾಗಿದ್ದು, ಸ್ಕೌಟ್ ಮತ್ತು ಗೈಡ್ ಸಂಸ್ಥೆಯ ಇತಿಹಾಸದಲ್ಲಿಯೇ ಮೂಡಬಿದರೆಯಲ್ಲಿ ನಡೆದ ಏಳು ದಿನಗಳ ಕಾಲದ ಅಂತಾರಾಷ್ಟ್ರೀಯ ಜಾಂಬೂರಿ ಸಮ್ಮೇಳನ ಅತ್ಯಂತ ಯಶಸ್ವಿಯಾಗಿದೆ ಎಂದು ಸಿಂಧ್ಯಾ ಅಭಿನಂದನೆ ಸಲ್ಲಿಸಿದರು.
ಇದನ್ನೂ ಓದಿ :ಲೋಕ್ ಅದಾಲತ್ನಲ್ಲಿ 64.13 ಲಕ್ಷ ಪ್ರಕರಣಗಳ ಇತ್ಯರ್ಥ: ನ್ಯಾ. ಬಿ. ವೀರಪ್ಪ