ಗಂಗಾವತಿ(ಕೊಪ್ಪಳ): ದೇವರಾಜ ಅರಸು ಅವರ ಸಂಪುಟದಲ್ಲಿ ಮೀನುಗಾರಿಕಾ ಸಚಿವರಾಗಿದ್ದ ಚಿಂತಲಾ ಯಾದವರಾವ್ (84) ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆ ಮತ್ತು ಹೃದಯಾಘಾತದಿಂದ ನಿಧನರಾಗಿದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ 1978ರಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಯಾದವರಾವ್, ಬಳಿಕ ಸುಮಾರು ಆರು ತಿಂಗಳಿಗೂ ಹೆಚ್ಚು ಕಾಲ ಮೀನುಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಮಾಜಿ ಸಂಸದ ಹೆಚ್.ಜಿ. ರಾಮುಲು ಅವರೊಂದಿಗೆ ಗುರುತಿಸಿಕೊಂಡು ರಾಜಕೀಯ ಮಾಡಿದ್ದ ಯಾದವರಾವ್, ಒಮ್ಮೆ ಮಾತ್ರ ಶಾಸಕರಾಗಿದ್ದರು. ಅದೇ ಸಂದರ್ಭದಲ್ಲಿ ಸಚಿವರಾಗಿದ್ದರು. ಮೃತರಿಗೆ ಪತ್ನಿ ಸುಗುಣ ಸೇರಿದಂತೆ ಒಬ್ಬ ಪುತ್ರಿ ವೈದ್ಯೆ, ನಾಲ್ವರು ಎಂಜಿನೀಯರ್ ಪುತ್ರರು ಇದ್ದಾರೆ.