ಗಂಗಾವತಿ :ನಾನು ಇಂದು ಕಣ್ಣೀರು ಹಾಕುವ ಪ್ರಯತ್ನ ಮಾಡುವುದಿಲ್ಲ. ನಾನು ಕಣ್ಣೀರು ಹಾಕುವ ಕತೆ 12 ವರ್ಷದ ಹಿಂದೆಯೇ ಮುಗಿದು ಹೋಗಿದೆ. ಈಗ ಏನಿದ್ದರೂ ರೆಡ್ಡಿ ಏನು ಎಂಬದನ್ನು ತೋರಿಸಿ ಕೊಡುವ ಕಾಲ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.
ತಮ್ಮ 56ನೇ ಜನ್ಮದಿನದ ನಿಮಿತ್ತ ಪಕ್ಷದ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೈಲಿನಿಂದ ನನಗೆ ಬಿಡುಗಡೆಯಾದ ಬಳಿಕ ನಾನು ಬೆಂಗಳೂರಿನಲ್ಲಿದ್ದೆ. ಆದರೆ ಬೆಂಗಳೂರು ನನಗೆ ಬೇಜಾರಾಗಿತ್ತು. ಬಯಲುಸೀಮೆ ಅದರಲ್ಲೂ ಬಳ್ಳಾರಿ - ಗಂಗಾವತಿ ಪ್ರದೇಶಕ್ಕೆ ಬಂದ ಬಳಿಕ ನನಗೆ ಹೆಚ್ಚು ಶಕ್ತಿ ಬಂದಿದೆ. 2023ರಲ್ಲಿ ನನಗೆ ಇಲ್ಲಿನ ಜನ ಒಂದು ಅವಕಾಶ ಕೊಡಲಿದ್ದಾರೆ. 2023ರ ಬಳಿಕ ಕ್ಷೇತ್ರ ಹೇಗಾಗುತ್ತದೆ ಎಂದು ಇಲ್ಲಿನ ಜನರೇ ನೋಡಲಿದ್ದಾರೆ ಎಂದರು.
ಮಾದರಿಯಾಗುವಂತೆ ಅಭಿವೃದ್ಧಿ ಕೈಗೊಳ್ಳುತ್ತೇನೆ: 2028ಕ್ಕೆ ಮತ್ತೆ ಚುನಾವಣೆಗೆ ನಿಂತಾಗ 2023ರ ಕ್ಷೇತ್ರದಲ್ಲಾದ ಬದಲಾವಣೆ ಗುರುತಿಸಿ ನನ್ನನ್ನು ಮತ್ತೆ ಆಯ್ಕೆ ಮಾಡುವಂತೆ ಕ್ಷೇತ್ರವನ್ನು ಇತರರಿಗೆ ಮಾದರಿಯಾಗುವಂತೆ ಅಭಿವೃದ್ಧಿ ಮಾಡಿ ತೋರಿಸುತ್ತೇನೆ. ನನ್ನ ಜನ್ಮ ದಿನದಂದೇ ಬಳ್ಳಾರಿಯಲ್ಲಿ ನನ್ನ ಪತ್ನಿ ಅರುಣಾಲಕ್ಷ್ಮಿ ಮತ್ತು ಪುತ್ರಿ ಬ್ರಹ್ಮಿಣಿ ಕಾರ್ಯಕ್ರಮ ಆಯೋಜಿಸುವ ಮೂಲಕ ನನ್ನ ಅನುಪಸ್ಥಿತಿ ಕಾರ್ಯಕರ್ತರಿಗೆ ಕಾಡದಂತೆ ಮಾಡಿದ್ದಾರೆ ಎಂದರು.
ರಾಜಕೀಯವಾಗಿ ನನ್ನನ್ನು ಮುಗಿಸಲು, ನಾನು ಸಂಪಾದಿಸಿದ್ದ ಎರಡು ಸಾವಿರ ಕೋಟಿ ಮೊತ್ತದ ಹಣವನ್ನು ಅಕ್ರಮ ಸಂಪಾದನೆ ಎಂದು ಆರೋಪ ಹೊರಿಸಿದರು. ಅಲ್ಲದೇ ಇಡೀ ಹಣವನ್ನು ಕೇಂದ್ರೀಯ ತನಿಖಾ ತಂಡ ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಿದರು.
ಹೈಕೋರ್ಟ್ನಲ್ಲಿ ನನ್ನ ಪರವಾಗಿ ತೀರ್ಪು ಬಂದಿದೆ: ರಾಜ್ಯದ ಹೈಕೋರ್ಟ್ನಲ್ಲಿ ನನ್ನ ಪರವಾಗಿ ತೀರ್ಪು ಬಂದಿದೆ. ಆ ಎರಡು ಸಾವಿರ ಕೋಟಿ ಈಗ ನಾಲ್ಕು ಸಾವಿರ ಕೋಟಿಯಾಗಿದೆ. ಆದರೆ, ತನಿಖಾ ತಂಡ ಇದೀಗ ಸುಪ್ರೀಂ ಮೆಟ್ಟಿಲೇರಿದೆ. ಅಲ್ಲೂ ನನಗೆ ಗೆಲುವು ಸಿಗಲಿದೆ. ನಾನು ಕಷ್ಟಪಟ್ಟು ಸಂಪಾದನೆ ಮಾಡಿದ್ದ ಹಣ ಶೀಘ್ರ ನನಗೆ ಸಿಗಲಿದೆ ಎಂದು ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ನಾನು ಮಂತ್ರಿಯಾಗಿದ್ದಾಗ ಬಳ್ಳಾರಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ 900 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. 2008ರಲ್ಲಿ ಸರ್ಕಾರ ಬಂದ ಮೇಲೆ ಕಲಬುರಗಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾದೆ ಎಂದರು.