ಗಂಗಾವತಿ: ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಪ್ರವೇಶ ಪಡೆದು, ಗುಂಡಿ ತೋಡಿ ಮಣ್ಣನ್ನು ಮರಳಾಗಿ ಪರಿವರ್ತಿಸುತ್ತಿದ್ದ ಫಿಲ್ಟರ್ ಘಟಕದ ಮೇಲೆ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ತಾಲೂಕಿನ ವೆಂಕಟಗಿರಿ ಹೋಬಳಿಯ ದಾಸನಾಳ ಗ್ರಾಮದಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿದ್ದ ಸರ್ವೇ ನಂಬರ್ 71/1/*ರ ಐದು ಎಕರೆ ಹನ್ನೊಂದು ಗುಂಟೆ ಜಮೀನಿನ ಪೈಕಿ 1.20 ಎಕರೆಯಲ್ಲಿ ಮಣ್ಣು ಅಗೆದು, ತೆಗ್ಗು ತೆಗೆದು ಸರ್ಕಾರಿ ಆಸ್ತಿಗೆ ಹಾನಿ ಮಾಡಿದ್ದಾರೆ ಎಂದು ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಆರ್ಹಾಳ ಗ್ರಾಮದ ಬಸವರಾಜ ದೇವೇಂದ್ರಪ್ಪ ಉಪ್ಪಾರ ಹಾಗೂ ದೇವೇಂದ್ರಪ್ಪ ಲಕ್ಷ್ಮಪ್ಪ ಉಪ್ಪಾರ ಎಂಬುವವರ ಮೇಲೆ ದೂರು ದಾಖಲಾಗಿದ್ದು, ಒಂದು ಜಾನ್ ಡೀರ್ ಕಂಪನಿಯ ಟ್ರಾಕ್ಟರ್ ಮತ್ತು ಟ್ರಾಲಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.