ಕೊಪ್ಪಳ: ಕೊಪ್ಪಳ ಜಿಲ್ಲೆಯ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯ ಜಿಲ್ಲಾ ವ್ಯವಸ್ಥಾಪಕ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ ಉಂಟಾಗಿದೆ. ಪ್ರಸ್ತುತ ಪುಷ್ಪಲತಾ ಎಂಬುವವರು ಜಿಲ್ಲಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಹುದ್ದೆಯಲ್ಲಿದ್ದ ವೈ.ಎ. ಕಾಳೆ ಎಂಬುವವರು ಕೆಎಸ್ಎಟಿಯಿಂದ ಆದೇಶ ತಂದು ಚಾರ್ಜ್ ತೆಗೆದುಕೊಳ್ಳಲು ಸೋಮವಾರ ಕಚೇರಿಗೆ ಬಂದಿದ್ದರು.
ಈ ವೇಳೆ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ ನಡೆದಿದ್ದು, ಕೆಎಸ್ಎಟಿ ಆದೇಶ ನನ್ನ ಪರವಾಗಿದ್ದು ಪುಷ್ಪಲತಾ ಅವರು ಚಾರ್ಜ್ ನೀಡುತ್ತಿಲ್ಲ ಎಂದು ವೈ.ಎ. ಕಾಳೆ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪುಷ್ಪಲತಾ ಅವರು ಮಾತನಾಡಿ, ಕೆಎಟಿ ಆದೇಶ ಕಾಳೆ ಅವರ ಪರವಾಗಿದ್ದರೂ ಸರ್ಕಾರದ ಆದೇಶ ಬರಬೇಕು. ಹೀಗಾಗಿ ನಾನು ಅವರಿಗೆ ನಾನು ಚಾರ್ಜ್ ನೀಡುವುದಿಲ್ಲ. ಸರ್ಕಾರದ ಆದೇಶವಿರದೆ ನಾನು ಚಾರ್ಜ್ ಕೊಡೋದಿಲ್ಲ. ಚಾರ್ಜ್ ಕೊಟ್ಟು ನಾನು ಎಲ್ಲಿಗೆ ಹೋಗಬೇಕು?. ಸರ್ಕಾರ ಆದೇಶ ಹೊರಡಿಸಲಿ. ಅಲ್ಲಿಯವರೆಗೂ ನಾನು ಅಧಿಕಾರ ಹಸ್ತಾಂತರ ಮಾಡುವುದಿಲ್ಲ ಎಂದು ಹೇಳಿದರು.
ವೈ.ಎ. ಕಾಳೆ ಮಾತನಾಡಿ, ಜನವರಿ 5ನೇ ತಾರೀಖಿನವರೆಗೆ ಜಿಲ್ಲಾ ವ್ಯವಸ್ಥಾಪಕನಾಗಿ ನಾನು ಇಲ್ಲಿ ಕೆಲಸ ಮಾಡಿದ್ದೆ, ಪುಷ್ಪಲತಾ ಅವರು ಗ್ರೂಪ್ ಬಿ ಅಧಿಕಾರಿಯಾಗಿದ್ದಾರೆ. ಈ ಹುದ್ದೆ ಗ್ರೂಪ್ ಎ ಆಗಿದೆ. ಅವರು ಕುತಂತ್ರದಿಂದ ಸರ್ಕಾರದಿಂದ ಆದೇಶ ಮಾಡಿಸಿಕೊಂಡು ಬಂದಿದ್ದಾರೆ. ಇದನ್ನು ನಾನು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಬೆಳಗಾವಿಯಲ್ಲಿ ಪ್ರಶ್ನೆ ಮಾಡಿದ್ದೆ. ಎರಡು ತಿಂಗಳಿಂದ ವಾದ ವಿವಾದಗಳು ನಡೆದಿದ್ದು, ನ್ಯಾಯ ಮಂಡಳಿ 1/5/2023 ರಂದು ಸರ್ಕಾರ ಹೊರಡಿಸಿದ ಆದೇಶವನ್ನು ರದ್ದು ಮಾಡಿದೆ. ಈ ಕಾರಣದಿಂದ ಅಧಿಕಾರ ಸ್ವೀಕರಿಸಲು ಇಲ್ಲಿಗೆ ಬಂದಿದ್ದೇನೆ ಎಂದರು.