ಗಂಗಾವತಿ (ಕೊಪ್ಪಳ) : ಸರಿಯಾದ ಮಳೆ ಇಲ್ಲದಿರುವ ಕಾರಣಕ್ಕೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಕಾರಟಗಿಯಲ್ಲಿ ರೈತರು ನಡೆಸುತ್ತಿರುವ ಧರಣಿ ಸಂದರ್ಭದಲ್ಲಿ ಇಬ್ಬರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ನಡೆದಿದೆ.
ಆರೋಗ್ಯದಲ್ಲಿ ದಿಢೀರ್ ಏರುಪೇರಿನಿಂದಾಗಿ ಆಸ್ಪತ್ರೆ ಪಾಲಾದ ರೈತರನ್ನು ಕಾರಟಗಿಯ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ನಲೀನ್ ಅತುಲ್ ಕುಮಾರ್ ಹಾಗೂ ಜಿಲ್ಲಾ ಎಸ್ಪಿ ಯಶೋಧಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಪ್ಪಳ, ರಾಯಚೂರು ಜಿಲ್ಲೆಗಳನ್ನು ಬರಪೀಡಿದ ಜಿಲ್ಲೆಗಳೆಂದು ಘೋಷಿಸುವಂತೆ ಹಾಗೂ ತುಂಗಭದ್ರಾ ಎಡದಂಡೆ ನಾಲೆಯ 31ನೇ ವಿತರಣಾ ಕಾಲುವೆಯ ಕೆಳಭಾಗಕ್ಕೆ ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ, ಕೃಷಿ ಕರ್ನಾಟಕ ರಾಜ್ಯ ರೈತ ಸಂಘ ಕಾರಟಗಿಯಲ್ಲಿ ಕಳೆದ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ.
ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ತಮ್ಮ ಅಹವಾಲು ಸ್ವೀಕರಿಸಬೇಕು ಎಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಧರಣಿಯ ಬಗ್ಗೆ ಸಚಿವ ಸ್ಪಂದಿಸಿಲ್ಲ ಎನ್ನಲಾಗಿದ್ದು, ಹೀಗಾಗಿ ರೈತರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ರೈತ ಮುಖಂಡರಿಗೆ ತಂಪು ಪಾನೀಯ: ಏತನ್ಮಧ್ಯೆ ರೈತ ಮುಖಂಡರು ಅಸ್ವಸ್ಥಗೊಂಡು ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ರೈತ ಮುಖಂಡರಿಗೆ ತಂಪು ಪಾನೀಯ ನೀಡಿ ಅವರ ಆರೋಗ್ಯ ವಿಚಾರಿಸಿದರು.