ಬೆಳೆ ಸಂರಕ್ಷಣೆಗೆ ಟ್ಯಾಂಕರ್ ನೀರಿನ ಮೊರೆ ಹೋದ ಕೊಪ್ಪಳದ ರೈತರು ಕೊಪ್ಪಳ:ಕೊಪ್ಪಳ ಜಿಲ್ಲೆಯಾದ್ಯಂತ ಸಕಾಲಕ್ಕೆ ಮಳೆಯಾಗದೇ ಬರ ತಾಂಡವವಾಡುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಅಲ್ಪಸ್ವಲ್ಪ ತೇವಾಂಶದಿಂದ ಜೀವ ಹಿಡಿದುಕೊಂಡಿದ್ದ ಬೆಳೆಗಳು ಒಣಗುತ್ತಿವೆ. ಅಳಿದುಳಿದಿರುವ ಈ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಮಾಡುತ್ತಿದ್ದಾರೆ.
ಟ್ಯಾಂಕರ್ ಮೂಲಕ ನೀರು:ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ, ಯರೇಹಂಚಿನಾಳ, ಸೊಂಪುರ ಸೇರಿದಂತೆ ವಿವಿಧ ಗ್ರಾಮದಲ್ಲಿ ರೈತರು ಬೆಳೆ ಸಂರಕ್ಷಿಸಲು ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ. ಟ್ಯಾಂಕರ್ ಮೂಲಕ ನೀರುಣಿಸುವುದು ಸರಳ ಕೆಲಸವಲ್ಲ. ಹೀಗಿದ್ದರೂ ಇರುವ ಒಂದಿಷ್ಟು ಬೆಳೆಯನ್ನಾದರೂ ಉಳಿಸಿಕೊಳ್ಳೋಣ ಎಂದು ಪಕ್ಕದ ಗ್ರಾಮಗಳ ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದು ನೀರು ಹಾಯಿಸುತ್ತಿದ್ದಾರೆ. ಬರದ ಹಿನ್ನೆಲೆಯಲ್ಲಿ ಏನೇ ಬೆಳೆದರೂ ಬೆಲೆ ಸಿಗುತ್ತದೆ ಎನ್ನುವ ಆತ್ಮವಿಶ್ವಾಸದೊಂದಿಗೆ ಸದ್ಯ ಉಳಿದಿರುವ ಈರುಳ್ಳಿ, ಮೆಣಸಿನಕಾಯಿಗೆ ನೀರುಣಿಸಲು ಸಜ್ಜಾಗಿದ್ದಾರೆ.
ಸಾಲ ಮನ್ನಕ್ಕೆ ಆಗ್ರಹ:ಮಳೆಯಾಶ್ರಿತ ಎರಿ ಭಾಗದ ಒಂದು ಎಕರೆಯ ಬೆಳೆ ಉಳಿಸಿಕೊಳ್ಳಬೇಕೆಂದರೆ ಸುಮಾರು 50 ರಿಂದ 60 ಟ್ಯಾಂಕರ್ ನೀರು ಬೇಕಾಗುತ್ತದೆ. ಟ್ಯಾಂಕರ್ ನೀರಿಗೆ ಸುಮಾರು 20 ಸಾವಿರ ರುಪಾಯಿ ಖರ್ಚಾಗುತ್ತದೆ. ಈ ಮೊದಲು ಹೊಲ ಹದಮಾಡಲು ಮತ್ತು ಬಿತ್ತನೆಗೆ ಬೀಜ, ಗೊಬ್ಬರ, ಡಿಸೆಲ್ ಇವೆಲ್ಲದಕ್ಕೂ ಸಾವಿರಾರು ರೂಪಾಯಿ ಖರ್ಚು ಮಾಡಲಾಗಿದೆ. ಇದರ ಜೊತೆಗೆ ಈಗ ಬೆಳೆಗೆ ನೀರುಣಿಸಲು ಹತ್ತಾರು ಸಾವಿರ ರುಪಾಯಿ ಖರ್ಚಾಗುತ್ತಿದೆ. ಸರಕಾರ ಗ್ಯಾರಂಟಿ ಯೋಜನೆಗಳನ್ನು ಕೈಬಿಟ್ಟು ರೈತರ ನೆರವಿಗೆ ಬರಬೇಕು. ಬರ ಪರಿಹಾರದೊಂದಿಗೆ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಹಾಗು ಕೊಳವೆ ಬಾವಿಯ ಮೂಲಕ ಒಂದಿಷ್ಟು ನೀರಾವರಿ ಹೊರತುಪಡಿಸಿ ಜಿಲ್ಲೆಯ ಬಹುತೇಕ ಭೂಮಿ ಮಳೆಯಾಶ್ರಿತವಾಗಿದೆ. ನೀರಿಲ್ಲದೆ ಬೆಳೆಗಳು ಒಣಗುತ್ತಿರುವುದನ್ನು ಕಂಡು ಅನ್ನದಾತರು ಮಮ್ಮಲ ಮರುಗುತ್ತಿದ್ದಾರೆ. ಸರಕಾರ ಆದಷ್ಟು ಬೇಗ ಬರ ಪರಿಹಾರ ಘೋಷಣೆ ಮಾಡಬೇಕು. ನರೇಗಾದಡಿ ಕೆಲಸ ನೀಡಿಬೇಕು ಎಂಬುದು ಈ ಭಾಗದ ರೈತರ ಒತ್ತಾಯ.
ಇದನ್ನೂ ಓದಿ:14 ವರ್ಷದಿಂದ ಪರಿಹಾರಕ್ಕಾಗಿ ರೈತರ ಸಂಕಟ: ಕೆರೆಯಲ್ಲಿ ಮುಳುಗಿ ಪ್ರಾಣ ಬಿಡುವ ಎಚ್ಚರಿಕೆ!