ಕೊಪ್ಪಳ:ನರೇಂದ್ರ ಮೋದಿ, ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಹೇಳಿದ ಕೂಡಲೇ ಅವರ ಮಾತನ್ನು ನಾವು ಒಪ್ಪಿಕೊಳ್ಳಬೇಕಾಗಿಲ್ಲ. ಎಲ್ಲವನ್ನು ತರ್ಕಬದ್ಧವಾಗಿ ಯೋಚಿಸುವ ಜ್ಞಾನ ನಮಗಿರಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿ ರೈತ ಸಂಘ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕೊರೊನಾ ವಿಷಯದಲ್ಲಿ ಜನರು ಜಾಗೃತಿಯಿಂದ ಇದ್ದರೆ ಸಾಕು. ಅದಕ್ಕೆ ಅಷ್ಟೊಂದು ಹೆದರಬೇಕಾಗಿಲ್ಲ. ಕೊರೊನಾ ಸಂದರ್ಭದಲ್ಲಿ ಸರ್ಕಾರ ಕಾರ್ಮಿಕರ ಕಾನೂನು, ಭೂಸ್ವಾಧೀನ, ಎಪಿಎಂಸಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದೆ. ಅಭಿವೃದ್ಧಿ ಚಿಂತನೆ ಮಾಡುವ ಹಾಗೂ ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟುವ, ಆರ್ಥಿಕ ಚೇತರಿಕೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸುವುದು ಬಿಟ್ಟು ಈ ಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿ ಮಾಡುವಂತಹ ಅವಶ್ಯಕತೆ ಏನಿತ್ತು. ಎಪಿಎಂಸಿ ರೈತರದ್ದು ಯಾವ ರಾಜಕಾರಣಿಯದ್ದು ಅಲ್ಲ ಎಂದರು.