ಕೊಪ್ಪಳ: ರೈತ ವರ್ಷವಿಡೀ ದುಡಿದು ಸಾಲ ಮಾಡಿ ಕೈಸುಟ್ಟುಕೊಂಡಿರುವ ಸಂಗತಿಗಳನ್ನೇ ಹೆಚ್ಚಾಗಿ ಕೇಳಿರುವ ನಮಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸದುಪಯೋಗ ಪಡೆದುಕೊಂಡು ಕೃಷಿಯಲ್ಲಿಯೂ ಉತ್ತಮ ಲಾಭ ಗಳಿಸಬಹುದು ಎಂಬುದನ್ನು ಜಿಲ್ಲೆಯ ರೈತರೊಬ್ಬರು ತೋರಿಸಿ ಕೊಟ್ಟಿದ್ದಾರೆ.
ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾಮದ ದ್ಯಾಮಣ್ಣ ಮ್ಯಾದನೇರಿ ಹಾಗೂ ಬಸವರಾಜ ಮ್ಯಾದನೇರಿ ಎಂಬ ರೈತ ಸಹೋದರರು ಜಮೀನಿನಲ್ಲಿ ಬಟನ್ ರೋಸ್ ಬೆಳೆದು ಯಶಸ್ವಿಯಾಗಿದ್ದಾರೆ.
ಬಟನ್ ರೋಜ್ ಬೆಳೆದು ಲಾಭ ಗಳಿಸಿದ ರೈತ ದ್ಯಾಮಣ್ಣ ಮ್ಯಾದನೇರಿ ಸಹೋದರರು ಉದ್ಯೋಗ ಖಾತ್ರಿ ಯೋಜನೆಯ ಸಹಭಾಗಿತ್ವದೊಂದಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಒಂದು ಎಕರೆ ಭೂಮಿಯಲ್ಲಿ ಬಟನ್ ಗುಲಾಬಿ ಬೆಳೆದಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ಬೆಂಗಳೂರಿನಿಂದ 1,800 ಗುಲಾಬಿ ಸಸಿಗಳನ್ನು ತಂದು ನಾಟಿ ಮಾಡಿದ್ದರು. ಈ ಗಿಡಗಳೀಗ ಹೂ ಬಿಡಲು ಪ್ರಾರಂಭಿಸಿವೆ. ದಿನಕ್ಕೆ 20 ರಿಂದ 25 ಕೆ.ಜಿ ಹೂ ಸಿಗುತ್ತಿದೆ.
'ಗುಲಾಬಿ ಬೆಳೆಯಲು ಉದ್ಯೋಗ ಖಾತ್ರಿ ಯೋಜನೆ ಮೂಲಕ ಹಣಕಾಸಿನ ಸಹಾಯ ಲಭ್ಯವಾಗಿದೆ. ಜೊತೆಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬಟನ್ ಗುಲಾಬಿ ಬೆಳೆದಿದ್ದೇವೆ. ಸ್ಥಳೀಯವಾಗಿ ಪ್ರತಿ ಕೆಜಿಗೆ ನೂರು ರೂಪಾಯಿಯಂತೆ ಸ್ಥಿರ ದರದಲ್ಲಿ ಹೂ ಮಾರಾಟ ಮಾಡುತ್ತಿದ್ದೇವೆ. ಈಗಾಗಲೇ ಹಾಕಿದ ಬಂಡವಾಳದ ಜೊತೆಗೆ ಸುಮಾರು ಒಂದು ಲಕ್ಷ ರೂಪಾಯಿ ಲಾಭ ಬಂದಿದೆ' ಎನ್ನುತ್ತಾರೆ ರೈತ ದ್ಯಾಮಣ್ಣ ಮ್ಯಾದನೇರಿ.
ರೈತನ ಮಗ ಪವನ ಕುಮಾರ್ ಮ್ಯಾದನೇರಿ ಮಾತನಾಡಿ, 'ಈ ಮೊದಲು ಜೋಳ, ಸಜ್ಜೆ, ಮೆಕ್ಕೆಜೋಳ, ಶೇಂಗಾ ಸೇರಿದಂತೆ ಇನ್ನಿತರೆ ಬೆಳೆ ಬೆಳೆಯುತ್ತಿದ್ದೆವು. ನಮ್ಮ ತಂದೆಯವರು ಬೇರೆ ಊರಿಗೆ ಹೋಗಿದ್ದಾಗ ಗುಲಾಬಿ ಬೆಳೆ ನೋಡಿ ನಾವು ಯಾಕೆ ಬೆಳೆಯಬಾರದು ಎಂದುಕೊಂಡು ಬೆಂಗಳೂರಿನಿಂದ ಗುಲಾಬಿ ಸಸಿ ತರಿಸಿ ನಾಟಿ ಮಾಡಿದರು. ಈಗ ಉತ್ತಮವಾಗಿ ಇಳುವರಿ ಬರುತ್ತಿದ್ದು, ಒಳ್ಳೆಯ ಆದಾಯ ತಂದುಕೊಡುತ್ತಿದೆ' ಎಂದರು.