ಕರ್ನಾಟಕ

karnataka

ETV Bharat / state

ಕಾಲಗರ್ಭ ಸೇರುತ್ತಿವೆ ಪುರಾತನ ಸ್ಮಾರಕಗಳು: ಕನಕಗಿರಿ ಪುಷ್ಕರಣಿಯ ಕಥೆಯಲ್ಲ, ಇದು ವ್ಯಥೆ - ಕನಕಾಚಲಪತಿ ದೇವಸ್ಥಾನ

ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನೂರಾರು ಐತಿಹಾಸಿಕ ಸ್ಮಾರಕಗಳು ನಿರ್ವಹಣೆಯ ಕೊರತೆಯಿಂದ ಸೊರಗಿ ಹೋಗುತ್ತಿವೆ. ಈ ಸ್ಮಾರಕಗಳು ಕಾಲಗರ್ಭ ಸೇರುತ್ತಿರುವುದು ಪ್ರಜ್ಞಾವಂತ ನಾಗರಿಕರ ಕಳವಳಕ್ಕೆ ಕಾರಣವಾಗಿದೆ.

Fading Ancient Monuments
ಕಾಲಗರ್ಭ ಸೇರುತ್ತಿರುವ ಪುರಾತನ ಸ್ಮಾರಕಗಳು: ಕನಕಗಿರಿ ಪುಷ್ಕರಣಿಯ ಕಥೆಯಲ್ಲ ವ್ಯೆಥೆ

By

Published : Jun 13, 2023, 9:33 PM IST

Updated : Jun 13, 2023, 10:36 PM IST

ಇತಿಹಾಸಕಾರ ಹಾಗೂ ಸಾಮಾಜಿಕ ಹೋರಾಟಗಾರ ದುರ್ಗಾದಾಸ ಯಾದವ ಹೇಳಿಕೆ

ಗಂಗಾವತಿ:ಐತಿಹಾಸಿಕ ಹಿನ್ನೆಲೆಯುಳ್ಳ ಕನಕಗಿರಿ ಪಟ್ಟಣವು ಧಾರ್ಮಿಕವಾಗಿ ಮಾತ್ರವಲ್ಲದೇ ಪುರಾತನ ಸ್ಮಾರಕಗಳಿಂದ ಸಾಂಸ್ಕೃತಿಕವಾಗಿ ತನ್ನದೇ ಆದ ವೈಶಿಷ್ಟತೆ ಹೊಂದಿವೆ. ಪುರಾತತ್ವ ಇಲಾಖೆ ಮತ್ತು ಧಾರ್ಮಿಕ ದತ್ತಿ ಇಲಾಖೆಯ ನಿರ್ಲಕ್ಷ್ಯದಿಂದ ಪುರಾತನ ಸ್ಮಾರಕಗಳು, ದೇವಾಲಯಗಳು ಕ್ರಮೇಣ ಕಾಲಗರ್ಭಕ್ಕೆ ಸೇರುತ್ತಿರುವುದು ಪ್ರಜ್ಞಾವಂತ ನಾಗರಿಕರಲ್ಲಿ ಅತೀವ ಬೇಸರ ಮೂಡಿಸಿದೆ. ಹಾಲಿ ಸಚಿವ ಶಿವರಾಜ ತಂಗಡಗಿ ಮೂರು ಬಾರಿ ಸಚಿವರಾಗಿ, ಬಸವರಾಜ ದಢೇಸ್ಗೂರು ಶಾಸಕರಾಗಿ ಇದೇ ಕ್ಷೇತ್ರದಿಂದ ಆಯ್ಕೆಯಾದರೂ ಈ ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಯಾವುದೇ ಗಮನ ಹರಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಕನಕಗಿರಿಯ ಹಿನ್ನೆಲೆ:ಕ್ರಿ.ಶ. 15ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಆಡಳಿತಾವಧಿಯಲ್ಲಿ ಮಾಂಡಲೀಕ ದೊರೆಗಳಿಂದ ಆಳಲ್ಪಡುತ್ತಿದ್ದ ಸುವರ್ಣಗಿರಿ (ಈಗಿನ ಕನಕಗಿರಿ) ವೈಭವದಿಂದ ಕೂಡಿದ್ದ ಸಮೃದ್ದ ನಾಡು. ಇಲ್ಲಿಯ ಅರಸರು ವಾಸ್ತುಶಿಲ್ಪ ಕಲೆಗೆ ವಿಶೇಷ ಒತ್ತು ನೀಡುತ್ತಿದ್ದರು. ನೂರಾರು ಮಠ, ಮಂದಿರ, ಸ್ಮಾರಕಗಳನ್ನು ಕಟ್ಟಿಸಿರುವುದು ಇದಕ್ಕೆ ನಿದರ್ಶನ. ಲೋಕನಾಥನಾದ ಮಹಾವಿಷ್ಣು ಕನಕಾಚಲ ಲಕ್ಷ್ಮೀನರಸಿಂಹ ನಾಮಾಂಕಿತನಾಗಿ ಸಾಲಿಗ್ರಾಮ ಶಿಲಾರೂಪದಲ್ಲಿ ನೆಲೆಸಿರುವುದು ಈ ಕ್ಷೇತ್ರದ ವಿಶೇಷತೆ. ಕನಕಗಿರಿ ಎಂದ ಕೂಡಲೇ ಜನಪದರ ಬಾಯಲ್ಲಿ ನೆನಪಾಗೋದು, ''ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪೆ ನೋಡಬೇಕು'' ಎಂಬ ಮಾತು. ಈ ನಾಣ್ಣುಡಿ ಅಜರಾಮರ.

ವಾಸ್ತುಶಿಲ್ಪದ ವಿಶೇಷತೆ:ಕನಕಾಚಲಪತಿ ದೇವಸ್ಥಾನ ಕೇವಲ ಧಾರ್ಮಿಕವಾಗಿ ಮಾತ್ರವಲ್ಲ, ವಾಸ್ತುಶಿಲ್ಪ ಕಲೆಯಿಂದಲೂ ವೀಶೇಷತೆ ಹೊಂದಿದೆ. 700 ಬಾವಿ, 700 ದೇವಾಲಯ ಹಾಗೂ 700 ಗೊಲ್ಲರ ಮನೆಗಳು ಇಲ್ಲಿದ್ದವು ಎಂಬುದನ್ನು ಇತಿಹಾಸ ಹೇಳುತ್ತದೆ. ಈ ಪಟ್ಟಣ ಪ್ರವಾಸಿತಾಣವಾಗಿಯೂ ಗುರುತಿಸಿಕೊಂಡಿದೆ. ವಿಪರ್ಯಾಸವೆಂದರೆ ಕೆಲವು ಮಂದಿರ- ಸ್ಮಾರಕ, ಕೋಟೆಯ ಗೋಡೆ ಹೀಗೆ ಒಂದೊಂದೇ ನಿರ್ವಹಣೆಯ ಕೊರತೆಯಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿವೆ. ಇನ್ನೂ ಕೆಲವು ಸ್ಮಾರಕಗಳು ಮನುಷ್ಯರ ದುರಾಸೆಯಿಂದ ಒತ್ತುವರಿ, ದನಗಾಹಿಗಳ ನಿಧಿಯಾಸೆಯಿಂದಲೂ ಮರೆಯಾಗುತ್ತಿವೆ.

ಬೆರಳೆಣಿಕೆಯಷ್ಟು ಸ್ಮಾರಕಗಳು ಮಾತ್ರ..:ಮಾನವನ ಹಸ್ತಕ್ಷೇಪದ ಮಧ್ಯೆಯೂ ಬೆರಳೆಣಿಕೆಯಷ್ಟು ಮಂದಿರ, ಸ್ಮಾರಕಗಳು ಮಾತ್ರ ಉಳಿದುಕೊಂಡಿದ್ದು, ಅಂತವುಗಳಲ್ಲಿ ತ್ರಿವೇಣಿ ಸಂಗಮದ ತಟದಲ್ಲಿಯೇ ವಿಶಾಲ, ಸಾವಿರಾರು ಜನ ಏಕಕಾಲಕ್ಕೆ ಪುಣ್ಯಸ್ನಾನ ಮಾಡುವ ದೊಡ್ಡದಾದ ಪುಷ್ಕರಣಿಯೊಂದು ಪಾಳುಬಿದ್ದ ಸ್ಥಿತಿಯಲ್ಲಿದೆ. ಇದೇ ನರಸಿಂಹ ತೀರ್ಥ. ಈ ಹಿಂದೆ ದೇವಸ್ಥಾನದ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಮತ್ತು ಲಕ್ಷ್ಮೀ ನರಸಿಂಹ ದೇವರ ತೆಪ್ಪೋತ್ಸವಕ್ಕಾಗಿ ಬಳಸಲಾಗುತ್ತಿತ್ತು. ಕಾಲಾನಂತರದ ಬರಗಾಲ, ಶತ್ರುಗಳ ದಾಳಿ ಮತ್ತು ದತ್ತಿ ಕೊರತೆಯಿಂದ ತೆಪ್ಪೋತ್ಸವ ಸೇವೆ ನಿಂತು ಹೋಗಿದೆ ಎನ್ನುತ್ತಾರೆ ಇಲ್ಲಿನ ಹಿರಿಯರು.

ಇದು ಎರಡನೇ ತಿರುಪತಿ:ಕನಕಾಚಲಪತಿ ದೇವರಲ್ಲಿ ಹರಕೆ ಕಟ್ಟಿಕೊಂಡ ಭಕ್ತರು, ಈ ಪುಷ್ಕರಣಿ ಹತ್ತಿರವೇ ತಲೆ ಮುಡಿ ಕೊಡುವುದು ಇಂದಿಗೂ ಸಹ ರೂಢಿಯಲ್ಲಿದೆ. ಕನಕಾಚಲಪತಿ ದೇವಸ್ಥಾನವು ಎರಡನೇ ತಿರುಪತಿ ಖ್ಯಾತಿಯೂ ಹೊಂದಿದ್ದು ಬಡವರು, ದೂರ ಪ್ರಯಾಣ ಮಾಡಲಾಗದ ಅಶಕ್ತರು ಕನಕಗಿರಿಯ ಕನಕಾಚಲಪತಿ ದೇವರಲ್ಲಿಯೇ ಸೇವೆ ಸಲ್ಲಿಸಿ ಪುನೀತರಾಗುತ್ತಾರೆ. ಆದರೆ, ದೇವಸ್ಥಾನದ ಆಡಳಿತ ಮಂಡಳಿಯು ಜಾತ್ರೆಯಲ್ಲಿ ತಲೆಮುಡಿ ಸೇವೆಗೆ ಈ ಪುಷ್ಕರಣಿಯನ್ನು ಬಳಸಿಕೊಂಡು ವಿಶೇಷ ದರ ನಿಗದಿ ಮಾಡಿ ದೇವಸ್ಥಾನಕ್ಕೆ ಆದಾಯ ಕಂಡುಕೊಳ್ಳುತ್ತಾರೆ. ತಲೆಮುಡಿ ಕೊಟ್ಟ ನಂತರ ಪುಣ್ಯಸ್ನಾನ ಮಾಡುವುದು ಇಲ್ಲಿನ ವಾಡಿಕೆ.

ಭಕ್ತರಿಗಿಲ್ಲ ಮೂಲಭೂತ ಸೌಲಭ್ಯ:ದೇವಸ್ಥಾನದ ಆಡಳಿತ ಮಂಡಳಿ ವಿವಿಧ ರೀತಿಯ ವಿಶೇಷ ಸೇವೆಗಳಿಂದ ಲಕ್ಷಗಟ್ಟಲೆ ಆದಾಯ ಗಳಿಸುತ್ತದೆ. ಭಕ್ತರ ಪುಣ್ಯಸ್ನಾನಕ್ಕೆ ನಲ್ಲಿ ನೀರಿನಲ್ಲಿ ಸ್ನಾನ ಮಾಡಲು ಅರೆಕಾಲಿಕ ವ್ಯವಸ್ಥೆ ಮಾಡಿದ್ದು, ಬಯಲಿನಲ್ಲಿಯೇ ಸ್ನಾನ ಮಾಡಿ ಬಟ್ಟೆ ಬದಲಿಸಿಕೊಳ್ಳಬೇಕಿದೆ.
ಹೀಗೆ ಭಕ್ತಗಣಕ್ಕೆ ತೃಪ್ತಿದಾಯಕ ಸೇವೆ ನೀಡುವಲ್ಲಿ ಮತ್ತು ನಿಂತು ಹೋಗಿರುವ ತೆಪ್ಪೋತ್ಸವದಂತಹ ಸೇವೆಗಳನ್ನು ಮರು ಆರಂಭಿಸಿ, ನಿಂತುಹೋದ ಸಂಪ್ರದಾಯಗಳನ್ನು ಪುನಾರಂಭಿಸುವ ಸತ್ಕಾರ್ಯಕ್ಕೆ ಚುನಾಯಿತರು ಹಾಗೂ ದೇಗುಲದ ಆಡಳಿತ ಮಂಡಳಿ ಆಸಕ್ತಿ ವಹಿಸಬೇಕಿದೆ.

ಇಚ್ಛಾಶಕ್ತಿಯ ಕೊರತೆ:ಇಚ್ಚಾಶಕ್ತಿಯ ಕೊರತೆಯಿಂದಾಗಿ ಪಾಳುಬಿದ್ದಿರುವ, ಪುಷ್ಕರಣಿಯ ಪುನರುಜ್ಜೀವನ ಧಾರ್ಮಿಕ ದತ್ತಿ, ಪುರಾತತ್ವ ಇಲಾಖೆ, ದೇವಸ್ಥಾನದ ಆಡಳಿತ ಮಂಡಳಿ ಅಥವಾ ಶಾಸಕ-ಸಂಸದರಾಗಲಿ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ. ಇಚ್ಛಾಶಕ್ತಿ ತೋರಬೇಕಿದೆ. ದೇವಸ್ಥಾನದ ಆಡಳಿತ ಮಂಡಳಿಗೆ ಬೇಕಾಗಿರುವುದು ಕೇವಲ ಆದಾಯ ಮಾತ್ರ. ಆ ದಾರಿಯನ್ನು ಮಾತ್ರ ಅವರು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಜವುಳ, ಉಪನಯನ, ಮಗುವಿನ ನಾಮಕರಣ, ದೀರ್ಘದಂಡ ನಮಸ್ಕಾರ, ವಿಶೇಷ ಸೇವೆಗೆ ಹೆಚ್ಚಿನ ಆದ್ಯತೆಯಿದೆ. ಅಲ್ಲದೇ ದೇವಸ್ಥಾನ ಮುಂಭಾಗ ಅಥವಾ ಆವರಣದಲ್ಲಿ ವ್ಯಾಪಾರಕ್ಕೆ ಹರಾಜು ಟಂಡರ್ ಮೂಲಕ ವಿಶೇಷ ಟ್ಯಾಕ್ಸ್ ಸಂಗ್ರಹಿಸುವ ದೇವರ ಹೆಸರಿನಲ್ಲಿ ನಿಂತರು ಕುಳಿತರೂ ಪ್ರತಿಯೊಂದರಲ್ಲಿ ಆದಾಯಯವನ್ನು ನಿರೀಕ್ಷಿಸುವ ದೇವಸ್ಥಾನದ ಆಡಳಿತ ಮಂಡಳಿಯು, ಇತರೆ ಜೀರ್ಣೋದ್ಧಾರಕ್ಕೆ ಮುಂದಾಗುತ್ತಿಲ್ಲ.

ನಿಂತುಹೋಗಿರುವ ಧಾರ್ಮಿಕ ಕಾರ್ಯಕ್ರಮ, ಭಕ್ತರ ಪುಣ್ಯಸ್ನಾನಕ್ಕೆ ನಿಂತು ಹೋಗ್ದ್ದು, ಬತ್ತಿ ಹೋಗಿರುವ ನರಸಿಂಹ ತೀರ್ಥದ ಪುನರುಜ್ಜೀವನಕ್ಕೆ ಕೈ ಹಾಕಿಲ್ಲವೇಕೆ? ಎಂಬ ಅಸಮಾಧಾನ ಭಕ್ತರಿಂದ ವ್ಯಕ್ತವಾಗುತ್ತಿದೆ. ಕನಕಗಿರಿಯ ಗತಕಾಲದ ಸ್ಮಾರಕಗಳ ಇತಹಾಸದಿಂದಾಗಿಯೇ 3 ಬಾರಿ ಸರ್ಕಾರ ಇಲ್ಲಿ ಅದ್ದೂರಿಯಾಗಿ ಉತ್ಸವಗಳನ್ನು ನಡೆಸಿದ್ದು, ಪುರಾತನ ಸ್ಮಾರಕಗಳ ಪುನರುಜ್ಜೀವನಕ್ಕಾಗಲಿ, ಅವುಗಳ ನಿರ್ವಹಣೆಗಾಗಲಿ ಶಾಶ್ವತವಾದ ಯಾವುದೇ ಕಾರ್ಯ ಕೈಗೊಂಡಿಲ್ಲ ಎಂಬುದು ದುರಾದೃಷ್ಟಕರ ಸಂಗತಿ. ಈ ಹಿಂದೆ ಯಡಿಯೂರಪ್ಪ ನೇತೃತ್ವದ ಸರ್ಕಾರದ ಅವಧಿಯಲ್ಲಿ 50 ಲಕ್ಷ ರೂ.ಗಳ ಅನುದಾನ ಮಂಜೂರು ಮಾಡಿ ಅಡಿಗಲ್ಲು ಸಮಾರಂಭ ಮಾಡಿದ್ದರು. ಆದರೆ, ಈವರೆಗೂ ಪುಷ್ಕರಣಿಯು ಜೀರ್ಣೋದ್ಧಾರ ಕೆಲಸವಾಗಿಲ್ಲ ಎಂದು ಇತಿಹಾಸಕಾರ ಹಾಗೂ ಸಾಮಾಜಿಕ ಹೋರಾಟಗಾರ ದುರ್ಗಾದಾಸ ಯಾದವ ಬೇಸರ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ:ಕೆಆರ್​ಎಸ್ ನೀರಿನ ಮಟ್ಟ 80 ಅಡಿಗೆ ಕುಸಿತ: ಶತಮಾನದ ಲಕ್ಷ್ಮೀ ನಾರಾಯಣಸ್ವಾಮಿ ದೇಗುಲ ಗೋಚರ

Last Updated : Jun 13, 2023, 10:36 PM IST

ABOUT THE AUTHOR

...view details