ಕೊಪ್ಪಳ: ರಾಜ್ಯದಲ್ಲಿನ ಪ್ರಸ್ತುತ ಸರ್ಕಾರದಲ್ಲಿ ಇಬ್ಬರು ಸಿಎಂ ಇದ್ದಾರೆ. ಒಬ್ಬರು ಸಾಂವಿಧಾನಿಕ ಸಿಎಂ ಹಾಗೂ ಇನ್ನೊಬ್ಬರು ಅಸಂವಿಧಾನಿಕವಾಗಿರುವ ಸಿಎಂ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲೀಗ ಈಗ ಇಬ್ಬರು ಸಿಎಂ ಇದ್ದಾರೆ. ಸಿಎಂ ಎಂದು ಯಡಿಯೂರಪ್ಪ ಬಳಿ ಹೋದರೆ ವಿಜಯೇಂದ್ರ ಬಳಿ ಹೋಗು ಅಂತಾರೆ. ಹೀಗಾಗಿ ಇನ್ನೊಬ್ಬ ಸಿಎಂ ಅಂದ್ರೆ ಅದು ವಿಜಯೇಂದ್ರ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ಸತ್ತು ಹೋಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಶಾಸಕರನ್ನು ರಾಜೀನಾಮೆ ಕೊಡುಸ್ತೀನಿ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳೋದು ಶುದ್ಧ ಸುಳ್ಳು. ಬಿಜೆಪಿಯಲ್ಲಾಗಿರುವ ಭಿನ್ನಮತದ ವಿಷಯವನ್ನು ಡೈವರ್ಟ್ ಮಾಡಲು ಜಾರಕಿಹೊಳಿ ಈ ರೀತಿ ಹೇಳಿಕೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಹಿಂದೆ ಹೋಗಿರೋದು ಮಹೇಶ್ ಕುಮಟಳ್ಳಿ ಮಾತ್ರ. ಕೆಲವರು ಅಧಿಕಾರಕ್ಕಾಗಿ, ಇನ್ನು ಕೆಲವರು ದುಡ್ಡು ತೆಗೆದುಕೊಂಡು ಹೋದರು ಎಂದು ಆರೋಪಿಸಿದರು.
ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ಬಿಜೆಪಿಯಲ್ಲಿ ಭಿನ್ನಮತವಿರೋದು ನಿಜ. ಯಡಿಯೂರಪ್ಪ ನಮ್ಮ ನಾಯಕರಲ್ಲ. ನಮ್ಮ ನಾಯಕರು ಮೋದಿ, ಅಮಿತ್ ಶಾ, ನಡ್ಡಾ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಹೇಳ್ತಾರೆ. ನಡ್ಡಾನೋ ಚಡ್ಡಾನೋ ಎಂದು ಸಿದ್ದರಾಮಯ್ಯ ಕುಹಕವಾಡಿದರು. ಬಿಜೆಪಿಯಲ್ಲಿ ಭಿನ್ನಮತ ಇನ್ನೂ ಬೆಳೆಯುತ್ತದೆ. ಬಿಜೆಪಿಯ ಭಿನ್ನಮತ ವಿಷಯದಲ್ಲಿ ನಾವು ಕೈ ಹಾಕೋದಿಲ್ಲ. ಮೊದಲು ಬಿಜೆಪಿ ಸರ್ಕಾರ ಬಿದ್ದು ಹೋಗಲಿ. ನಂತರ ಸರ್ಕಾರ ರಚನೆ ಕುರಿತು ನೋಡೋಣ. ನನ್ನ ಹಾಗೂ ಡಿಕೆಶಿ ನಡುವೆ ಉತ್ತನ ಬಾಂಧವ್ಯವಿದೆ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೊರೊನಾ ಭೀತಿ ಹಿನ್ನೆಲೆ ಇನ್ನೆರಡು ತಿಂಗಳು ಶಾಲೆ ಪ್ರಾರಂಭಿಸಬಾರದು. ಅದಕ್ಕೂ ಪೂರ್ವದಲ್ಲಿ ಸುರಕ್ಷತಾ ಕ್ರಮಗಳನ್ನು ಸಿದ್ಧತೆ ಮಾಡಿಕೊಳ್ಳಲಿ ಎಂದರು. ರಾಜ್ಯದಲ್ಲಿ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ. ಸಂಬಳ ಕೊಡೋದಕ್ಕೂ ಸರ್ಕಾರದ ಬಳಿ ಹಣವಿಲ್ಲ. ಜಿಡಿಪಿ ಕುಸಿತ ಕಂಡಿದೆ. ಜಿಡಿಪಿ ಕುಸಿತವಾಗಿರೋದೇ ಮೋದಿ ಸರ್ಕಾರದ ಸಾಧನೆ. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ನಮ್ಮ ಕಾರ್ಯಕ್ರಮಗಳನ್ನು ಬಿಟ್ಟು ಬೇರೆ ಯಾವ ಹೊಸ ಕಾರ್ಯಕ್ರಮ ನೀಡಿದೆ? ಹಣಕಾಸಿನ ಕುರಿತು ವಸತಿ ಸಚಿವ ವಿ. ಸೋಮಣ್ಣಗೆ ಅಜ್ಞಾನವಿದೆ. ರಾಜಕೀಯ ದುರುದ್ದೇಶದಿಂದ ಹೇಳಿಕೆಗಳನ್ನು ಸೋಮಣ್ಣ ಕೊಡ್ತಾರೆ. ಸೋಮಣ್ಣ ಯಾವ ಆರ್ಥಿಕ ತಜ್ಞ? ಅವರು ರಾಜ್ಯದಲ್ಲಿ ಬಡವರಿಗೆ ಈಗ ಎಷ್ಟು ಮನೆ ಕಟ್ಟಿಸಿದ್ದಾರೆ? ಅವರ ಸಾಧನೆ ಏನು ಎಂದು ಪ್ರಶ್ನಿಸಿದರು.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚು ಗೆಲ್ತಾರೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಚುನಾವಣೆಯನ್ನು ಮುಂದೂಡುತ್ತಿದೆ. ನಾವು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ರು.