ಗಂಗಾವತಿ :ತಮ್ಮ ಜಮೀನು ಸ್ವಾಧೀನ ಪಡಿಸಿಕೊಂಡಿದ್ದರೂ ಇಲಾಖೆ ತಮಗೆ ಪರಿಹಾರ ನೀಡಿಲ್ಲ ಎಂದು ಆಕ್ಷೇಪಿಸಿ ರೈತರೊಬ್ಬರು ರೈಲ್ವೆ ನಿಲ್ದಾಣಕ್ಕೆ ತೆರಳಲು ಇದ್ದ ಸಾರ್ವಜನಿಕ ರಸ್ತೆಯನ್ನು ಅಗೆದು ಗುಂಡಿ ತೋಡಿದ್ದ. ಈ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಇಲಾಖೆಯ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಿಸಿದ್ದಾರೆ.
ತಹಶೀಲ್ದಾರ್ ಯು. ನಾಗರಾಜ್ ಸೂಚನೆ ಮೇರೆಗೆ ಕಂದಾಯ ಇಲಾಖೆಯ ಮರಳಿ ಹೋಬಳಿಯ ಉಪ ತಹಶೀಲ್ದಾರ್ ಮಹೆಬೂಬ ಅಲಿ, ಕಂದಾಯ ನಿರೀಕ್ಷಕ ಹನುಮಂತಪ್ಪ, ಸಹಾಯಕ ಸಾಧಿಕ್ ಶ್ರೀರಾಮನಗರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದರು.
ರೈಲ್ವೆ ನಿಲ್ದಾಣಕ್ಕೆ ತೆರಳಲು ಇದ್ದ ರಸ್ತೆಯಲ್ಲಿ ಆಳವಾದ ಗುಂಡಿ ತೋಡಿ ಜನ ಸಂಚಾರಕ್ಕೆ ಆಸ್ಪದವಿಲ್ಲದಂತೆ ಮಾಡಲಾಗಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು, ತಕ್ಷಣ ಜೆಸಿಬಿ ಯಂತ್ರದ ಸಹಾಯದಿಂದ ರಸ್ತೆ ದುರಸ್ತಿ ಮಾಡಿ ಜನರ ಓಡಾಟಕ್ಕೆ ಅನುಕೂಲ ಕಲ್ಪಿಸಿದರು.