ಕೊಪ್ಪಳ: ಕೊರೊನಾ ಸೋಂಕಿತರ ಬಳಿ ಸುಳಿಯುವುದಕ್ಕೂ ಜನರು ಹೆದರುತ್ತಾರೆ. ಆದ್ರೆ ಸೋಂಕಿತರಿಗೆ ಊಟ, ಉಪಹಾರ, ಔಷಧಿ ಸೇರಿ ಅಗತ್ಯ ವಸ್ತುಗಳು ಬೇಕಾಗುತ್ತವೆ. ಹೋಂ ಐಸೋಲೇಷನ್ನಲ್ಲಿ ಇರುವವರಿಗೆ ಹಾಗೂ ಆಸ್ಪತ್ರೆಯಲ್ಲಿ ಇರುವ ಸೋಂಕಿತರಿಗೆ ಬೇಕಾದ ಅಗತ್ಯ ವಸ್ತುಗಳನ್ನು, ಔಷಧಿಗಳನ್ನು ಯಾರು ನೀಡುತ್ತಾರೆ ಎಂಬುದರ ಕುರಿತ ವಿಶೇಷ ವರದಿ ಇಲ್ಲಿದೆ.
ಕೊರೊನಾ ಸೋಂಕಿತರಿಗೆ ಜಿಲ್ಲಾಡಳಿತದಿಂದ ಅಗತ್ಯ ವಸ್ತುಗಳ ಪೂರೈಕೆ : ಕೊಪ್ಪಳ ಡಿಸಿ ಕೊಪ್ಪಳ ಜಿಲ್ಲೆಯಲ್ಲಿಯೂ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಜನರು ನಿತ್ಯವೂ ಭಯ ಪಡುವಂತಾಗಿದೆ. ಕೆಲ ನಿಯಮಗಳು ಸಡಿಲಿಕೆಯಾದ ಬಳಿಕ ಎಲ್ಲಿ, ಹೇಗೆ, ಯಾವ ರೀತಿಯಾಗಿ ಕೊರೊನಾ ಸೋಂಕು ಹರಡುತ್ತದೆಯೋ ಎಂದು ಗೊತ್ತಾಗುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಭೀತಿ ಹೆಚ್ಚಿದೆ.
ಆ.26 ರ ಸಂಜೆಯ ವರದಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 5,557 ಪಾಸಿಟಿವ್ ಪ್ರಕರಣಗಳಿವೆ. ಈ ಪೈಕಿ 1,234 ಜನರು ಹೋಂ ಐಸೋಲೇಷನ್ನಲ್ಲಿದ್ದಾರೆ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇರಿ ಸುಮಾರು 225 ಜನ ಸೋಂಕಿತರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ, ಸೋಂಕಿತರ ಮನೆಗಳಿಗೆ ಹಾಗೂ ಸೀಲ್ಡೌನ್ ಆದ ಏರಿಯಾಗಳಲ್ಲಿ ದಾನಿಗಳು, ಸಮಾಜ ಸೇವಕರು, ಸೇವಾ ಮನೋಭಾವದ ಅನೇಕರು ಅಗತ್ಯ ವಸ್ತುಗಳನ್ನು, ರೇಷನ್ ಕಿಟ್ಗಳನ್ನು, ತರಕಾರಿಯನ್ನು ವಿತರಿಸುತ್ತಿದ್ದರು.
ಆದರೆ ಇದೀಗ ಲಾಕ್ಡೌನ್ ಸಡಿಲಿಕೆಯಾದ ಬಳಿಕ ದಾನಿಗಳ ಸೇವೆ ಸ್ಥಗಿತಗೊಂಡಿದೆ. ಹೀಗಾಗಿ, ಆಸ್ಪತ್ರೆಯಲ್ಲಿರುವ ಹಾಗೂ ಹೋಂ ಐಸೋಲೇಷನ್ನಲ್ಲಿರುವ ಸೋಂಕಿತರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಈ ಹಿಂದೆ ಕೋವಿಡ್ ಕೇರ್ ಸೆಂಟರ್ನಲ್ಲಿರುವವರಿಗೆ ಹಾಗೂ ಆಸ್ಪತ್ರೆಯಲ್ಲಿರುವ ಸೋಂಕಿತರಿಗೆ ಊಟ ಮತ್ತು ಉಪಹಾರವನ್ನು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಒದಗಿಸಲಾಗುತ್ತಿತ್ತು. ಈಗ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಊಟ, ಉಪಹಾರ ಪೂರೈಸಲು ಟೆಂಡರ್ ಪಡೆದಿರುವ ಗುತ್ತಿಗೆದಾರರು ಪೂರೈಸುತ್ತಿದ್ದಾರೆ.
ಆಸ್ಪತ್ರೆಗಳಲ್ಲಿ ಔಷಧಿ, ಊಟ, ಉಪಹಾರ ಪೂರೈಕೆ ಸಮರ್ಪಕವಾಗಿ ನಡೆದಿದೆ. ಹೋಂ ಐಸೋಲೇಷನ್ ನಲ್ಲಿರುವರಿಗೆ ಊಟ ಮತ್ತು ಉಪಹಾರದ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ ಅವರಿಗೆ ಬೇಕಾದ ಔಷಧಿ ಮತ್ತು ಮಾಸ್ಕ್ ಸೇರಿದಂತೆ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತ ಪೂರೈಸುತ್ತಿದೆ. ಹೋಂ ಐಸೋಲೇಷನ್ ಮಾಡುವಾಗಲೇ ಜಿಲ್ಲಾಡಳಿತದಿಂದ 10 ದಿನದ ಮಾತ್ರೆಗಳು, ಮಾಸ್ಕ್ ನೀಡಲಾಗುತ್ತದೆ. ಒಂದು ವೇಳೆ ಅವರಿಗೆ ಮಾಸ್ಕ್, ಮಾತ್ರೆಗಳು ಸಿಗದಿದ್ದರೆ ಆಶಾ ಕಾರ್ಯಕರ್ತೆಯರ ಮೂಲಕ ಕೇಳಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.
ಕೆಲ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಹೋಂ ಐಸೋಲೇಷನ್ನಲ್ಲಿರುವವರಿಗೆ ಹೆಚ್ಚಿನ ಅಗತ್ಯ ವಸ್ತುಗಳನ್ನು ಅವರವರ ಕುಟುಂವದವರು ನೋಡಿಕೊಳ್ಳುತ್ತಿದ್ದಾರೆ.