ಗಂಗಾವತಿ: ವಿಶ್ವ ಪರಿಸರ ದಿನಾಚರಣೆ ಎಂದರೆ ಎಲ್ಲೆಡೆ ಗಿಡನೆಟ್ಟು ನೀರೆರೆದು ಪೋಷಣೆ ಮಾಡುವುದು, ಜಾಥಾ ಹಮ್ಮಿಕೊಳ್ಳುವುದು ಅಥವಾ ಜನರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವಂತ ಕಾರ್ಯಗಳನ್ನು ಸಂಘ-ಸಂಸ್ಥೆಗಳು ಹಮ್ಮಿಕೊಳ್ಳುವುದು ಸಹಜ. ಆದರೆ, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಯುವಕರ ತಂಡವೊಂದು ಮಾದರಿ ಕಾರ್ಯಕ್ಕೆ ಕೈಹಾಕಿ ಗಮನ ಸೆಳೆದಿದೆ.
ಹೌದು ಗ್ರಾಮದಲ್ಲಿರುವ ಶತಮಾನಗಳಷ್ಟು ಹಳೆಯ ಮತ್ತು ದಶಕಗಳ ಕಾಲ ಗ್ರಾಮದ ನೀರಿನ ಕೊರತೆ ನೀಗಿಸಿದ್ದ ಬಾವಿಗಳ ಸ್ವಚ್ಛತೆಗೆ ಯುವಕರು ಪಣ ತೊಟ್ಟಿದ್ದಾರೆ. ತಾಲೂಕಿನ ಢಣಾಪುರ ಗ್ರಾಮದಲ್ಲಿರುವ ಹಸಿರು ಬಳಗ ಮತ್ತು ಕ್ಲೀನ್ ಅಂಡ್ ಗ್ರೀನ್ ಫೋರ್ಸ್ ಎಂಬ ಯುವಕರ ತಂಡವೊಂದು ಗ್ರಾಮದಲ್ಲಿ ಈ ಹಿಂದೆ ಕುಡಿಯುವ ನೀರಿನ ಮುಖ್ಯ ಮೂಲಗಳಾಗಿದ್ದ ಮತ್ತು ದಶಕಗಳಷ್ಟು ಕಾಲ ಗ್ರಾಮದ ಜನರ ಕುಡಿಯುವ ನೀರಿನ ದಾಹ ನೀಗಿಸಿದ್ದ ಬಾವಿಗಳಿಗೆ ಕಾಯಕಲ್ಪ ನೀಡಲು ಮುಂದಾಗಿದೆ.
ಬಾವಿಯಲ್ಲಿನ ಕಸಕಡ್ಡಿಗಳನ್ನು ತೊಲಗಿಸಿ ಮತ್ತೆ ಬಾವಿಗೆ ನೈಸರ್ಗಿಕ ನೀರಿನ ಸೆಲೆಗಳನ್ನು ಹರಿಯುವಂತೆ ಮಾಡಲು ಗ್ರಾಮದ ಹಳೆಯ ಐದು ಭಾವಿಗಳ ಸ್ವಚ್ಛತೆಗೆ ಕೈ ಹಾಕುವ ಮೂಲಕ ಈ ತಂಡ ವಿಭಿನ್ನವಾಗಿ ಪರಿಸರ ದಿನಾಚರಣೆಗೆ ಇಳಿದಿದ್ದಾರೆ. ಗ್ರಾಮದ ದೇವಸ್ಥಾನ, ಸಾರ್ವಜನಿಕ ಸ್ಥಳದಲ್ಲಿನ ಐದು ಬಾವಿಗಳನ್ನು ಗುರುತಿಸಿರುವ ಈ ಹಸಿರು ಬಳಗ ಅವುಗಳ ಸ್ವಚ್ಛತೆಗೆ ಕಾರ್ಯ ಆರಂಭಿಸಿದೆ. ಆರಂಭದಲ್ಲಿ ಗ್ರಾಮದ ಬಸವಣ್ಣ ದೇವರ ಗುಡಿಯ ಆವರಣದಲ್ಲಿರುವ ಬಾವಿಯಲ್ಲಿನ ಕಸ ನಿವಾರಣೆ ಮಾಡಲಾಯಿತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕ್ಲೀನ್ ಅಂಡ್ ಗ್ರೀನ್ ಫೋರ್ಸ್ ತಂಡದ ಸಂಚಾಲಕ ಮೊಹಮ್ಮದ್ ರಫಿ, 'ಈ ಹಿಂದೆ ಬಾವಿಗಳು ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿದ್ದವು. ಕಾಲಘಟ್ಟದಲ್ಲಿ ಬಾವಿಗೆ ಪರ್ಯಾಯವಾಗಿ ನೀರಿನ ಮೂಲಗಳು ಸುಲಭಕ್ಕೆ ಸಿಗುತ್ತಿರುವ ಕಾರಣಕ್ಕೆ ಇವು ಪಾಳು ಬಿದ್ದವು. ಅಂತರ್ಜಲ ವೃದ್ಧಿಗೆ ಆಧಾರವಾಗಿದ್ದ ಇವುಗಳ ಪುನಶ್ಚೇತನಕ್ಕೆ ಇದೀಗ ಸ್ವಚ್ಛತೆ ಮಾಡಲಾಗುತ್ತಿದೆ' ಎಂದು ರಫಿ ತಿಳಿಸಿದರು.