ಬೆಂಗಳೂರು/ಕೊಪ್ಪಳ/ಧಾರವಾಡ:ನಗರಗಳು ಬೆಳೆದಂತೆ ಭೂಮಿಗೆ ಚಿನ್ನದ ಬೆಲೆ ಬರುತ್ತಿದೆ. ಜತೆಗೆ ತುಂಡು ಭೂಮಿಗೂ ಭಾರಿ ಬೇಡಿಕೆಯಿದೆ. ಇದರ ನಡುವೆ ಭೂಮಿ ಒತ್ತುವರಿ ಮಾಡಿಕೊಳ್ಳುವವರ ಸಂಖ್ಯೆ ಕೂಡ ಕಡಿಮೆಯೇನಿಲ್ಲ.
ಸರ್ಕಾರಿ ಭೂಮಿ ಅತಿಕ್ರಮ - ರಾಜ್ಯದಲ್ಲಿವೆ ಹಲವು ಪ್ರಕರಣಗಳು! ರಾಜ್ಯದಲ್ಲಿ 2017ರಿಂದ 2019ರವರೆಗೂ 63.8 ಲಕ್ಷ ಎಕರೆ ಸರ್ಕಾರಿ ಜಮೀನು ಇತ್ತು. ಆದ್ರೀಗ ಅದು 61.88 ಲಕ್ಷ ಎಕರೆಗೆ ಇಳಿದಿದೆ ಎಂದು ಅಂದಾಜಿಸಲಾಗಿದೆ. ನ್ಯಾಯಾಲಯದ ಮೆಟ್ಟಿಲೇರಿರುವ ಭೂ ಒತ್ತುವರಿ ಪ್ರಕರಣದಲ್ಲಿ ಶೇ. 30 ಕ್ಕೂ ಹೆಚ್ಚು ಪ್ರಕರಣಗಳು ಬೆಂಗಳೂರಿಗೆ ಸೇರಿದ್ದು, ಸಾರ್ವಜನಿಕ ಉದ್ದೇಶಕ್ಕಾಗಿಯೇ ಶೇ. 97 ರಷ್ಟು ಭೂಮಿ ಒತ್ತುವರಿಯಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 1,10,096 ಎಕರೆ 20 ಗುಂಟೆ ಸರ್ಕಾರಿ ಭೂಮಿಯಿದ್ದು, ಆ ಪೈಕಿ 4,232 ಎಕರೆ 1 ಗುಂಟೆ ಭೂಮಿ ಒತ್ತುವರಿಯಾಗಿದೆ. ಒತ್ತುವರಿ ತೆರವುಗೊಳಿಸುವ ಕಾರ್ಯ ಚುರುಕುಗೊಳಿಸಿರುವ ಜಿಲ್ಲಾಡಳಿತ ಈಗಾಗಲೇ 3,076 ಎಕರೆ 8 ಗುಂಟೆ ಭೂಮಿಯ ಒತ್ತುವರಿ ತೆರವುಗೊಳಿಸಿದೆ.
ಸರ್ಕಾರದ ಜಮೀನು ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ 279, ಹುಬ್ಬಳ್ಳಿಯಲ್ಲಿ 724, ಕುಂದಗೋಳದಲ್ಲಿ 13 ಪ್ರಕರಣ ದಾಖಲಾಗಿವೆ. ಇದಕ್ಕೆ ಕಡಿವಾಣ ಹಾಕಲು ಆಗಾಗ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಅದೆಷ್ಟೇ ಕ್ರಮ ಕೈಗೊಂಡರೂ ಸರ್ಕಾರಿ ಭೂಮಿ ಒತ್ತುವರಿಯಾಗುತ್ತಿರುವ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಒತ್ತುವರಿ ತೆರವುಗೊಳಿಸುವ ಕಾರ್ಯ ಮತ್ತಷ್ಟು ಚುರುಕುಗೊಳ್ಳಬೇಕಿದೆ. ಭೂಗಳ್ಳರಿಗೆ ಬಿಸಿ ಮುಟ್ಟಿಸಬೇಕಿದೆ.