ಕುಷ್ಟಗಿ (ಕೊಪ್ಪಳ): ತಾಲೂಕಿನ ಲಿಂಗದಳ್ಳಿ ಗ್ರಾಮ ಪಂಚಾಯತಿಯ ಹೊಮ್ಮಿನಾಳ ಗ್ರಾಮದ ಕೆರೆ ಹೂಳೆತ್ತುವ ಕೆಲಸದಲ್ಲಿ ನಾಲ್ವರು ಅತಿಥಿ ಶಿಕ್ಷಕರು ಹಾಗೂ ಓರ್ವ ಉಪನ್ಯಾಸಕ ನಿರತರಾಗಿ ಸೈ ಎನಿಸಿಕೊಂಡಿದ್ದಾರೆ.
ಎದುರಾದ ಆರ್ಥಿಕ ಸಂಕಷ್ಟಗಳಿಗೆ ಉದ್ಯೋಗ ಖಾತ್ರಿ ಯೋಜನೆ ಸಕಾಲಿಕ ಪರಿಹಾರವಾಗಿದೆ. ಕೋವಿಡ್-19 ಲಾಕ್ಡೌನ್ ಜಾರಿಯಾದಾಗಿನಿಂದ ಶಾಲಾ-ಕಾಲೇಜು ಆರಂಭವಾಗದ ಹಿನ್ನೆಲೆಯಲ್ಲಿ, ಕುಟುಂಬದ ನಿರ್ವಹಣೆಗಾಗಿ ಗ್ರಾಮದ ಕೆರೆಯ ಹೂಳೆತ್ತುವ ಕೆಲಸದಲ್ಲಿ ಅತಿಥಿ ಶಿಕ್ಷಕರಾದ ಈರಪ್ಪ, ಶರಣಬಸವ, ಲಕ್ಷ್ಮಣ, ಅಮರೇಶ ಹಾಗೂ ಉಪನ್ಯಾಸಕ ಯಮನೂರಪ್ಪ ಉದ್ಯೋಗ ಚೀಟಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ.
ಇಂತಹ ಸಂಕಷ್ಟದ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ವರದಾನವಾಗಿದ್ದು, ತಮ್ಮ ಜಮೀನಿನಲ್ಲಿ ಕೃಷಿ ಬದುವು ಮಾಡಿಸಿಕೊಂಡಿದ್ದು, ಸಕಾಲಿಕ ಮಳೆಯಿಂದ ಕೃಷಿ ಬದುವು ತುಂಬಿದೆ. ಬೆಳೆಗಳು ಉತ್ತಮವಾಗಿ ಬಂದಿದ್ದು, ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಸಿಕ್ಕಿದೆ.
ಈ ಬಗ್ಗೆ ಗ್ರಾಮದ ಅಮರೇಶ ಕಡಗದ ಪ್ರತಿಕ್ರಿಯೆ ನೀಡಿ, ನಾಲ್ವರು ಅತಿಥಿ ಶಿಕ್ಷಕರು, ಓರ್ವ ಉಪನ್ಯಾಸಕರು ಉದ್ಯೋಗ ಖಾತ್ರಿ ಕೆಲಸ ನಿರ್ವಹಿಸಿ ಮಾದರಿಯಾಗಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ 100 ಮಾನವ ದಿನಗಳ ಬದಲಿಗೆ 200 ದಿನಗಳ ಕೆಲಸ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಜಿಪಂ ಸಿಇಓ ರಘುನಂದಮೂರ್ತಿ ಅವರಿಗೆ ಕ್ರಮಕ್ಕೆ ಆಗ್ರಹಿಸಿದ್ದಾರೆ.