ಕೊಪ್ಪಳ: ಉತ್ತರ ಕರ್ನಾಟಕ ಭಾಗದಲ್ಲಿ ಎಳ್ಳ ಅಮಾವಾಸ್ಯೆ ಆಚರಣೆ ವಿಶೇಷವಾಗಿರುತ್ತದೆ. ರೈತರು ಭೂತಾಯಿಗೆ ಪೂಜೆ ಸಲ್ಲಿಸಿ ಸಂಭ್ರಮದಿಂದ ಎಳ್ಳ ಅಮಾವಾಸ್ಯೆ ಆಚರಿಸಿದರು.
ಈ ಭಾಗದಲ್ಲಿ ಎಳ್ಳ ಅಮಾವಾಸ್ಯೆಯನ್ನು ರೈತಾಪಿ ವರ್ಗದ ಜನರು ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನದಂದು ರೈತರು ತಮ್ಮ ಹೊಲಗಳಿಗೆ ತೆರಳಿ, ಬೆಳೆದು ನಿಂತಿರುವ ಪೈರಿನೊಂದಿಗೆ ಕಂಗೊಳಿಸುವ ಭೂತಾಯಿಗೆ ಪೂಜೆ ಸಲ್ಲಿಸುತ್ತಾರೆ. ಇದು ಚರಗಾ ಚೆಲ್ಲುವ ಹಬ್ಬ ಎಂದು ಪ್ರಸಿದ್ಧಿ ಪಡೆದಿದೆ.
ಐದು ಕಲ್ಲುಗಳನಿಟ್ಟು ಪೂಜೆ (ಕಳ್ಳರು ಎಂದು ಪೂಜಿಸುತ್ತಾರೆ) ಭೂತಾಯಿಗೆ ಪೂಜೆ ಸಲ್ಲಿಸುವ ರೈತರು, ಕಳ್ಳನಿಗೂ ಪೂಜೆ ಮಾಡುತ್ತಾರೆ. ಬನ್ನಿ ಮರದ ಕೆಳಗೆ ಭೂತಾಯಿಗೆ ಪೂಜೆ ಸಲ್ಲಿಸಿ, ಅದರ ಹಿಂದೆಯೇ 5 ಕಲ್ಲುಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ಈ ಐದು ಕಲ್ಲುಗಳೇ ಕಳ್ಳರು. ತಮ್ಮ ಹೊಲದಲ್ಲಿ ಬೆಳೆದ ಬೆಳೆಯನ್ನು ಕಳ್ಳರು ಕದ್ದುಕೊಂಡು ಹೋಗಬಾರದು ಎನ್ನುವ ಕಾರಣಕ್ಕೆ ಕಳ್ಳನಿಗೂ ಪೂಜೆ ಸಲ್ಲಿಸಿ ಸಂತುಷ್ಟಪಡಿಸುತ್ತಾರೆ.
ಓದಿ: ನಾನು ಅತೃಪ್ತನಿರಬಹುದು, ಆದರೆ ಸಭೆ ಮಾಡುವಷ್ಟಲ್ಲ: ಶಾಸಕ ಪರಣ್ಣ ಮುನವಳ್ಳಿ
ಎಳ್ಳ ಅಮಾವಾಸ್ಯೆಯ ಆಚರಣೆಗಾಗಿ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿಕೊಂಡು ಮನೆ ಮಂದಿಯಲ್ಲದೆ ಅಕ್ಕಪಕ್ಕದ ಮತ್ತು ತಮಗೆ ಬೇಕಾದವರನ್ನು ಹೊಲಕ್ಕೆ ಕರೆದುಕೊಂಡು ಹೋಗುತ್ತಾರೆ. ಪೂಜೆಯ ಬಳಿಕ ಮನೆಯಿಂದ ತಂದ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಎಳ್ಳು ಹೋಳಿಗೆ, ಕಡ್ಲಿ ಹೋಳಿಗೆ, ಹಪ್ಪಳ, ಸಂಡಿಗೆ ಸೇರಿದಂತೆ ವಿವಿಧ ಬಗೆಯ ಪಲ್ಯದ ರುಚಿ ಭೋಜನವನ್ನು ಒಟ್ಟಿಗೆ ಕುಳಿತು ಸವಿಯುತ್ತಾರೆ. ವರ್ಷಕ್ಕೊಮ್ಮೆ ಬರುವ ಈ ಎಳ್ಳ ಅಮಾವಾಸ್ಯೆ ನಮ್ಮ ಪಾಲಿಗೆ ಒಂದು ಸುದಿನ ಎಂದೇ ರೈತರು ಬಣ್ಣಿಸುತ್ತಾರೆ.