ಗಂಗಾವತಿ (ಕೊಪ್ಪಳ) :ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (ಕೆಆರ್ಪಿಪಿ) ಇಲ್ಲಿನ ಕೇಂದ್ರ ಕಚೇರಿಯ ಮೇಲೆ ಚುನಾವಣಾಧಿಕಾರಿಗಳು ಇಂದು ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಕಚೇರಿಯಲ್ಲಿ ದಾಖಲೆ ಇಲ್ಲದೇ ಸಂಗ್ರಹಿಸಿಟ್ಟಿದ್ದ ಪಕ್ಷದ ಪ್ರಚಾರ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ 24 ಗಂಟೆಯೊಳಗೆ ಸೂಕ್ತ ದಾಖಲೆ ನೀಡಬೇಕು, ಇಲ್ಲವಾದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಜಿ. ಜನಾರ್ದನ ರೆಡ್ಡಿ ಅವರಿಗೆ ಗಂಗಾವತಿಯ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಬಸವಣೆಪ್ಪ ಕಳಶೆಟ್ಟಿ ನೋಟಿಸ್ ನೀಡಿದ್ದಾರೆ.
ಕೆಆರ್ಪಿಪಿ ಕಚೇರಿ ಮೇಲೆ ಚುನಾವಣಾಧಿಕಾರಿಗಳಿಂದ ದಾಳಿ: ಜನಾರ್ದನ ರೆಡ್ಡಿಗೆ ನೋಟಿಸ್ ಜಾರಿ
ಕೆಆರ್ಪಿಪಿ ಕಚೇರಿಯಲ್ಲಿ ಶೋಧ ನಡೆಸಿದ ಚುನಾವಣಾಧಿಕಾರಿಗಳು ಪಕ್ಷದ ಪ್ರಚಾರ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜನಾರ್ದನ ರೆಡ್ಡಿ ಭಾವಚಿತ್ರವಿರುವ ಹಾಗು ಕೆಆರ್ಪಿಪಿ ಚಿಹ್ನೆ ಇರುವ ಅಪಾರ ಪ್ರಮಾಣದ ಪ್ರಚಾರ ಸಾಮಗ್ರಿಗಳನ್ನು ಅನಧಿಕೃತವಾಗಿ ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ. ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ ನಗರದ ಉಮರ್ ಶೇಂಗಾ ಮಿಲ್ ಹಿಂದೆ ಇರುವ ಮೈಲಾರಲಿಂಗೇಶ್ವರ ಕಟ್ಟಡದಲ್ಲಿ ಪಕ್ಷಕ್ಕೆ ಸಂಬಂಧಿಸಿದ ಕ್ಯಾಲೆಂಡರ್, ಬುಕ್ಲೆಟ್ ಕ್ಯಾಲೆಂಡರ್, ಶಾಲು, ಟೋಪಿ ಹಾಗು ಪಕ್ಷದ ಬಾವುಟಗಳು ಸಿಕ್ಕಿವೆ. ಸಾಮಗ್ರಿಗಳ ಬಗ್ಗೆ ಪ್ರಶ್ನಿಸಿದಾಗ ಪಕ್ಷದ ಕೆಲವರು ಅಪೂರ್ಣ ಮಾಹಿತಿ ನೀಡಿದ್ದಾರೆ. ಹೀಗಾಗಿ 24 ಗಂಟೆಯೊಳಗೆ ಉತ್ತರ ನೀಡುವಂತೆ ಅಧಿಕಾರಿಗಳು ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ :ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರ್ಟ್ ಆದೇಶ