ಕೊಪ್ಪಳ:ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆದಿದ್ದು, ಫಲಿತಾಂಶವನ್ನು ಕಾಯ್ದಿರಿಸಲಾಗಿದೆ. 31 ಸದಸ್ಯ ಬಲದ ಕೊಪ್ಪಳ ನಗರಸಭೆಯಲ್ಲಿ 15 ಕಾಂಗ್ರೆಸ್, 10 ಬಿಜೆಪಿ, 2 ಜೆಡಿಎಸ್, ಓರ್ವ ವೆಲ್ಫೇರ್ ಪಾರ್ಟಿ ಹಾಗೂ 3 ಜನ ಪಕ್ಷೇತರ ಸದಸ್ಯರಿದ್ದಾರೆ.
ಕೊಪ್ಪಳ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ, ಘೋಷಣೆಯಾಗದ ಫಲಿತಾಂಶ ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಲತಾ ಚಿನ್ನೂರು, ಉಪಾಧ್ಯಕ್ಷ ಸ್ಥಾನಕ್ಕೆ ಜರೀನಾ ಬೇಗಂ ಹಾಗೂ ಬಿಜೆಪಿಯಿಂದ ವಿದ್ಯಾ ಹೆಸರೂರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಗರತ್ನ ಕುಕನೂರು ನಾಮಪತ್ರ ಸಲ್ಲಿಸಿದ್ದರು.
ಕಾಂಗ್ರೆಸ್ನ 15 ಸದಸ್ಯರು, ಇಬ್ಬರು ಪಕ್ಷೇತರರು, ಇಬ್ಬರು ಜೆಡಿಎಸ್, ವೆಲ್ಫೇರ್ ಪಾರ್ಟಿಯ ಓರ್ವ ಸದಸ್ಯ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ ಶಾಸಕರ ಒಂದು ಮತ ಸೇರಿ ಕಾಂಗ್ರೆಸ್ ಬಲ 21 ಆಗಿದ್ದು, ಆಯ್ಕೆ ಬಹುತೇಕ ಖಚಿತವಾಗಿದೆ ಎಂದು ತಿಳಿದು ಬಂದಿದೆ. ಆದರೆ, ಅಧಿಕೃತ ಘೋಷಣೆ ಬಾಕಿ ಉಳಿದಿದ್ದು, ಫಲಿತಾಂಶ ಕಾಯ್ದಿರಿಸಲಾಗಿದೆ.
ಈ ಕುರಿತಂತೆ ಮಾತನಾಡಿದ ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ನ್ಯಾಯಾಲಯದ ಆದೇಶದಂತೆ ಇಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಸಲಾಗಿದೆ. ಚುನಾವಣೆಯ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗುತ್ತದೆ. ನ್ಯಾಯಾಲಯ ನೀಡುವ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.