ಕೊಪ್ಪಳ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ಅಥವಾ ಬಾಳೆಹಣ್ಣು ವಿತರಣೆ ಕುರಿತಂತೆ ಈಗ ಪರ - ವಿರೋಧದ ಚರ್ಚೆ ನಡೆದಿದೆ. ಕೆಲವರು ಮೊಟ್ಟೆ ಬೇಡ ಎನ್ನುತ್ತಿದ್ದರೆ, ಇನ್ನು ಕೆಲವರು ಮೊಟ್ಟೆ ಬೇಕು ಎನ್ನುತ್ತಿದ್ದಾರೆ. ಅಲ್ಲದೇ, ಆಯ್ಕೆ ಮಕ್ಕಳಿಗೆ ಇರಲಿ ಎಂಬ ಮಾತುಗಳೂ ಇವೆ. ಈ ನಡುವೆ ಕೊಪ್ಪಳ ಜಿಲ್ಲೆಯಲ್ಲಿ ಮೊಟ್ಟೆ ಬೇಕು ಎಂಬ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 93 ರಷ್ಟಿದೆ ಎಂಬ ಅಂಶ ಸಾಬೀತಾಗಿದೆ.
ಹೌದು, ಮಕ್ಕಳಲ್ಲಿ ತೀವ್ರ ಅಪೌಷ್ಠಿಕತೆ ಹೊಂದಿರುವ ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆ ಸೇರಿದಂತೆ 6 ಜಿಲ್ಲೆಗಳು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ವಾರದ ಮೂರು ದಿನ ಮೊಟ್ಟೆ ಅಥವಾ ಬಾಳೆ ಹಣ್ಣು ನೀಡುವ ಯೋಜನೆಯನ್ನು ಆರಂಭಿಸಿದೆ. ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಲ್ಲಿ ತೀವ್ರ ಅಪೌಷ್ಠಿಕತೆ ಹೆಚ್ಚಾಗಿದೆ. ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗಾಗಿ 6 ರಿಂದ 15 ವರ್ಷದೊಳಗಿನ ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ಮೊಟ್ಟೆ ನೀಡಲು ಯೋಜನೆ ಜಾರಿ ಮಾಡಲಾಗಿದೆ.
ಒಂದು ವೇಳೆ, ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣನ್ನು ನೀಡಬೇಕು. ಹಣ್ಣು ಹಾಗೂ ಮೊಟ್ಟೆ ತಿನ್ನುವ ಬಗ್ಗೆ ಯಾರಿಗೂ ಒತ್ತಾಯವಿಲ್ಲ. ಆಯ್ಕೆಯನ್ನು ಮಕ್ಕಳಿಗೆ ಬಿಡಲಾಗಿದೆ. ಈ ಕುರಿತು ಪಾಲಕರು ಶಾಲೆ ಮುಖ್ಯಸ್ಥರಿಗೆ ಒಪ್ಪಿಗೆ ಪತ್ರ ನೀಡಬೇಕಾಗಿದೆ. ಡಿಸೆಂಬರ್ 01 ರಿಂದ ಆರಂಭವಾದ ಮೊಟ್ಟೆ ಅಥವಾ ಬಾಳೆಹಣ್ಣು ನೀಡುವ ಯೋಜನೆ ಮಾರ್ಚ್ ತಿಂಗಳವರೆಗೂ ಪ್ರಾಯೋಗಿಕವಾಗಿದ್ದು, ಈ ದಿನಗಳಲ್ಲಿ ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಣೆಯಾಗಿದ್ದರೆ ಯೋಜನೆಯನ್ನು ಮುಂದುವರೆಸುವ ಉದ್ದೇಶ ಹೊಂದಲಾಗಿದೆ.