ಕೊಪ್ಪಳ:ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳು ಇಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಬರದ ಪರಿಸ್ಥಿತಿಯ ಜೊತೆಗೆ ಹಸಿರು ಬರದ ದುಸ್ಥಿತಿ ದಾಖಲಿಸಿದರು. ಅಧ್ಯಯನ ತಂಡದಲ್ಲಿ ಕೇಂದ್ರ ಕುಡಿಯುವ ನೀರು ಹಾಗು ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ.ರಾಜಶೇಖರ್, ಪಶುಸಂಗೋಪನೆ ಇಲಾಖೆಯ ನಿರ್ದೇಶಕ ಆರ್.ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿರಾಂ, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡ ಇದ್ದರು. ಅಧಿಕಾರಿಗಳ ತಂಡವು ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನ ವಿವಿಧ ಹೋಬಳಿಯ ರೈತರ ಜಮೀನಿನಲ್ಲಿನ ಬರ ಅಧ್ಯಯನ ಕೈಗೊಂಡಿತು.
ಯಲಬುರ್ಗಾ ಹೋಬಳಿಯ ಬಂಡಿ ಗ್ರಾಮದ ರೈತ ಮಹಿಳೆಯ ಹೊಲಕ್ಕೆ ತಂಡ ಭೇಟಿ ನೀಡಿದ ವೇಳೆ "ಮೂರು ತಿಂಗಳಾಯ್ತು ಬಿತ್ತಿ. ಮಳೆ ಇಲ್ಲದೆ ಬೆಳೆ ಹಾಳಾಯ್ತು" ಎಂದು ಶರಣಮ್ಮ ರೊಟ್ಟಿ ಗೋಳಿಟ್ಟರು. ಕಳೆದ ವರ್ಷ ಇದೇ ಸಜ್ಚಿ ಬೆಳೆ ಸರಿಯಾಗಿ ಬಂದಿತ್ತು ಎಂದು ಹಿಂದಿನ ವರ್ಷದ ಸಜ್ಜೆ ತೆನೆಗಳನ್ನು ರೈತ ಮಹಿಳೆ ಅಧಿಕಾರಿಗಳಿಗೆ ತೋರಿಸಿದರು. ಬೆಳೆ ಹಾಳಾಗಿದ್ದರಿಂದ ಜೀವನ ಹೇಗೆ ನಡೆಸ್ತೀರಿ? ನಿಮಗೆ ಎಷ್ಟು ಜನ ಮಕ್ಕಳು? ಬೆಳೆ ವಿಮೆ ಮಾಡಿಸಿದ್ದೀರಾ? ಎಂದು ತಂಡದ ಅಧಿಕಾರಿಗಳು ಶರಣಮ್ಮ ಅವರೊಂದಿಗೆ ಮಾತನಾಡಿ ಮಾಹಿತಿ ಪಡೆದರು.
ಅಧಿಕಾರಿಗಳು ಬಂಡಿ ಗ್ರಾಮದಲ್ಲಿನ ಮತ್ತೊಬ್ಬ ರೈತ ಚಂದ್ರಶೇಖರ ಬಡಿಗೇರ ಅವರ ಎರಡೂವರೆ ಎಕರೆ ಹೊಲದಲ್ಲಿ ಬೆಳೆದ ಸಜ್ಜೆ ಬೆಳೆಯ ವೀಕ್ಷಣೆ ನಡೆಸಿ ಮಾಹಿತಿ ಪಡೆದರು. ಅಲ್ಲಿಂದ ಬೆನಕನಾಳ ಗ್ರಾಮಕ್ಕೆ ತೆರಳಿ ರೈತ ಹನುಮಪ್ಪ ಸೆಡ್ಡಿಬಟ್ಟಲದ ಅವರ ಹೊಲಕ್ಕೆ ಭೇಟಿ ನೀಡಿ ಮೆಕ್ಕೆಜೋಳ ಬೆಳೆ ವೀಕ್ಷಣೆ ನಡೆಸಿದರು.
"ನಮ್ಮ ಎರಡು ಎಕರೆ ಹೊಲದಲ್ಲಿನ ಮೆಕ್ಕೆಜೋಳ ಬೆಳೆಯು ಮಳೆ ಇಲ್ಲದೇ ಹಾಳಾಗಿದೆ. ಪರಿಹಾರ ಸಿಗದೇ ಇದ್ದರೆ ಸಾವೇ ಗತಿ" ಎಂದು ಬೆನಕನಾಳ ಗ್ರಾಮದ ರೈತ ಮಲ್ಲಪ್ಪ ಬಿಂಗಿಕೊಪ್ಪದ ಅಳಲು ತೋಡಿಕೊಂಡರು. ಬಳಿಕ ತಂಡವು ಯರಗೇರಾ ಹನುಮನಾಳ ಹೋಬಳಿಯ ಬಾದಿಮನಾಳ, ಚಳಗೇರಾ ಗ್ರಾಮಕ್ಕೆ ತೆರಳಿ ಗ್ರಾಮದ ರೈತ ಶರಣಪ್ಪ ಬಾರಕೇರ ಅವರ ತೋಟಗಾರಿಕಾ ಬೆಳೆ ಹಾನಿಯಾಗಿದ್ದನ್ನು ಪರಿಶೀಲಿಸಿದರು.