ಕೊಪ್ಪಳ: ಮಠ ಎಂದರೆ ಅದು ಕೇವಲ ದಾಸೋಹ, ಅಧಾತ್ಮ, ಪೂಜೆ ಪುನಸ್ಕಾರವಲ್ಲ. ಮಠಕ್ಕೂ ಸಾಮಾಜಿಕ ಹೊಣೆಗಾರಿಕೆ ಸಾಕಷ್ಟಿರುತ್ತದೆ ಎಂದು ಕೇವಲ ಹೇಳುವುದಲ್ಲ. ಅದನ್ನು ಸ್ವತಃ ಕಾರ್ಯರೂಪಕ್ಕೆ ತರುವ ಮೂಲಕ ಕೊಪ್ಪಳದ ಶ್ರೀ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮನೆ ಮಾತಾಗಿದ್ದಾರೆ.
ಗಿಣಗೇರಿ ಕೆರೆ ಅಭಿವೃದ್ಧಿಗೆ ಚಾಲನೆ ಸರಳ ಜಾತ್ರೆ ಆಚರಿಸಿ ಮೂರು ಮಹತ್ವದ ಕೆಲಸ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದ ಶ್ರೀಗಳು ಇದೀಗ ಗಿಣಗೇರಿ ಕೆರೆ ಅಭಿವೃದ್ಧಿಗೊಳಿಸುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಮುಂಬರುವ ದಿನಗಳಲ್ಲಿ ಗಿಣಗೇರಿ ಕೆರೆ ಕೊಪ್ಪಳದ "ರಂಗನತಿಟ್ಟು" ಆಗಲಿದೆ.
ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೊಪ್ಪಳ ಬಳಿಯ ಸುಮಾರು 24 ಕಿಲೋ ಮೀಟರ್ ಉದ್ದದ ಹಿರೇಹಳ್ಳವನ್ನು ಸ್ವಚ್ಛಗೊಳಿಸುವ ಮೂಲಕ ಜಲಮೂಲವನ್ನು ಸಂರಕ್ಷಿಸುವ ಸಂದೇಶ ಸಾರಿದ್ದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಸರಳ ಜಾತ್ರೆ ಆಚರಿಸುವ ಮೂಲಕ ಸಾಮಾಜಿಕ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುವುದಾಗಿ ಘೋಷಿಸಿದ್ದರು.
ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗಲು ಡಿಜಿಟಲ್ ಲೈಬ್ರರಿ ಸ್ಥಾಪಿಸಿದ ಬಳಿಕ ಈಗ ಕೊಪ್ಪಳ ತಾಲೂಕಿನ ಗಿಣಗೇರಿಯಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸಲು ಚಾಲನೆ ನೀಡಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ಕೆರೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ತಾಲೂಕಿನಲ್ಲಿಯೇ ಅತಿ ದೊಡ್ಡ ಕೆರೆ ಎನಿಸಿರುವ ಗಿಣಗೇರಿ ಕೆರೆ 248 ಎಕರೆ ವಿಸ್ತೀರ್ಣದ ಈ ಕೆರೆಯನ್ನು ಅಭಿವೃದ್ಧಿಪಡಿಸಿ ಒಂದು ಸುಂದರ ತಾಣ ಮಾಡುವ ಉದ್ದೇಶ ಹೊಂದಲಾಗಿದೆ. ಕೆರೆಯಲ್ಲಿನ ಹೂಳು ತೆಗೆಯುವುದು, ಕೆರೆಯ ಸುತ್ತಲೂ ಏರಿ ನಿರ್ಮಾಣ, ವಾಕಿಂಗ್ ಟ್ರ್ಯಾಕ್, ಸುತ್ತಲೂ ಸಸಿಗಳನ್ನು ಬೆಳೆಸುವುದು, ಉದ್ಯಾನ, ಕೆರೆಯ ನಡು ಮಧ್ಯದಲ್ಲಿ ದೇವಸ್ಥಾನ, ಬೋಟಿಂಗ್ ವ್ಯವಸ್ಥೆ ಮಾಡಲು ಯೋಜಿಸಲಾಗಿದೆ.
ಸದ್ಯ ಈ ಅಭಿವೃದ್ಧಿ ಕಾರ್ಯಕ್ಕೆ ಸುಮಾರು 4 ಕೋಟಿ ರೂ.ಗೂ ಅಧಿಕ ಹಣ ಖರ್ಚಾಗಲಿದೆ. ಸುಮಾರು 40 ದಿನಕ್ಕೂ ಹೆಚ್ಚು ಕಾಲ ಈಗ ಈ ಅಭಿವೃದ್ದಿ ಕಾರ್ಯ ನಡೆಯಲಿದೆ. ಇದಕ್ಕಾಗಿ ಹತ್ತಾರು ಜೆಸಿಬಿ, ಹಿಟಾಚಿ, ಟಿಪ್ಪರ್, ಟ್ರ್ಯಾಕ್ಟರ್ ಹಾಗೂ ಸ್ವಯಂಸೇವಕರು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ಸದುದ್ದೇಶದ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ರಾಜಕಾರಣಿಗಳೂ ಉದಾರದಿಂದ ದೇಣಿಗೆ ನೀಡುತ್ತಿದ್ದಾರೆ.
ಗಿಣಗೇರಿ ಸುತ್ತಮುತ್ತ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳು ತಳವೂರಿದ್ದು ಈ ಕಾರ್ಯಕ್ಕೆ ಕೈಜೋಡಿಸುತ್ತಿವೆ. ಹೀಗಾಗಿ ಈಗ ಶುರುವಾಗಿರುವ ಗಿಣಗೇರಿ ಕೆರೆ ಇನ್ನೊಂದಿಷ್ಟು ದಿನದಲ್ಲಿ ಸ್ವರೂಪ ಬದಲಿಸಿಕೊಳ್ಳಲಿದೆ ಎಂದರು.