ಕೊಪ್ಪಳ: ಮನುಷ್ಯನಿಗೆ ಅಂತರಂಗದ ಶಕ್ತಿ ಹಾಗೂ ಬಹಿರಂಗದ ನಡೆ ನುಡಿಯನ್ನು ಕಲಿಸಿಕೊಡುವುದೇ ಸಾಹಿತ್ಯ ಎಂದು ರಾಯಚೂರಿನ ಹಿರಿಯ ಸಾಹಿತಿ ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಹೇಳಿದರು.
೮ ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾಲೂಕಿನ ಶಿವಪುರದಲ್ಲಿ ನಡೆದ ಕೊಪ್ಪಳ ತಾಲೂಕ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಸತ್ಯದರ್ಶನವನ್ನು ಮಾಡಿಸುತ್ತದೆ. ಅದು ಜೀವನ ದರ್ಶನವನ್ನು ಕಲಿಸಿಕೊಡುತ್ತದೆ. ಆಹಾರವಿಲ್ಲದಿದ್ದರೆ ದೇಹ ಹೇಗೆ ಬಳಲುತ್ತದೆಯೋ ಹಾಗೆ ಮಸ್ತಕಕ್ಕೆ ಜ್ಞಾನವು ಅಷ್ಟೇ ಮುಖ್ಯವಾಗಿದ್ದು, ಮನುಷ್ಯನಿಗೆ ಜ್ಞಾನವಿಲ್ಲದಿದ್ದರೆ ಪಶುಗೆ ಸಮಾನನಾಗುತ್ತಾನೆ. ಇಂತಹ ಜ್ಞಾನ ಸಾಹಿತ್ಯದಿಂದ ಬರುತ್ತದೆ. ಹೀಗಾಗಿ, ಪ್ರತಿಯೊಬ್ಬರೂ ಸಾಹಿತ್ಯಾಸಕ್ತಿಯನ್ನು ಬೆಳಸಿಕೊಳ್ಳಬೇಕು ಎಂದು ಹೇಳಿದರು.
ಇದಕ್ಕೂ ಮೊದಲುಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಈಶ್ವರ ಹತ್ತಿ ಅವರನ್ನು ಗೌರವಪೂರ್ವಕವಾಗಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ಲಂಬಾಣಿ ಮಹಿಳೆಯರ ನೃತ್ಯ, ಜಾಂಜ್ ಮೇಳ, ಹಗಲುವೇಷಧಾರಿಗಳು, ಕುಂಭಕಲಶ ಹೊತ್ತ ಮಹಿಳೆಯರು ಮೆರವಣಿಗೆಗೆ ಮೆರಗು ನೀಡಿದರು. ಮೆರವಣಿಗೆಯಲ್ಲಿ ಕನ್ನಡದ ಬಾವುಟ ಹಿಡಿದು ಸಾಗುವ ಮೂಲಕ ಗ್ರಾಮದ ಜನರು, ಯುವಕರು ಹಾಗೂ ಸಾಹಿತ್ಯಾಸಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಕನ್ನಡ ಪ್ರಜ್ಞೆ ವಿಶ್ವ ಪ್ರಜ್ಞೆಯಾಗಬೇಕು ಎಂದು ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಅವರು ಕರೆ ನೀಡಿದರು. ಸಮ್ಮೇಳನದ ಸರ್ವಾಧ್ಯಕ್ಷ, ಸಾಹಿತಿ ಈಶ್ವರ ಹತ್ತಿ, ಕಸಾಪ ಸಂಘ ಸಂಸ್ಥೆಗಳ ರಾಜ್ಯ ಪ್ರತಿನಿಧಿ ಡಾ. ಶೇಖರಗೌಡ ಮಾಲಿಪಾಟೀಲ್, ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ್ ಅಂಗಡಿ ಸೇರಿದಂತೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.