ಗಂಗಾವತಿ(ಕೊಪ್ಪಳ):ತಾಲೂಕಿನ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿಯ ಹೊಸಳ್ಳಿ ಗ್ರಾಮ ಒಂದರಲ್ಲಿಯೇ ಸುಮಾರು 50ಕ್ಕೂ ಹೆಚ್ಚು ಜನರಿಗೆ ಸಾಮೂಹಿಕವಾಗಿ ಜ್ವರ ಕಾಣಿಸಿಕೊಂಡ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಇದೀಗ ವೈದ್ಯರ ತಂಡ ಗ್ರಾಮಕ್ಕೆ ಭೇಟಿ ನೀಡಿದೆ.
ಹೊಸಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ವೈದ್ಯರ ತಂಡ ಗ್ರಾಮದಲ್ಲಿ ಜ್ವರದಿಂದ ಬಳಲುತ್ತಿದ್ದವರನ್ನು ಪರೀಕ್ಷಿಸಿ ಸೂಕ್ತ ಮುಂಜಾಗ್ರತೆ ಕೈಗೊಳ್ಳುವಂತೆ ಸಲಹೆ ನೀಡಿದ್ದು, ಇನ್ನು ಕೆಲವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ಪೈಕಿ ಗಂಗಾವತಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದವರ ಪೈಕಿ ನಾಲ್ವರಿಗೆ ಡೆಂಗ್ಯೂ ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರಿಗೆ ಕಿಟ್ ಮೂಲಕ ಪರೀಕ್ಷಿಸಿದಾಗ ಡೆಂಗ್ಯೂ ಪಾಸಿಟಿವ್ ಬಂದಿದೆ. ಹೀಗಾಗಿ ಹೆಚ್ಚಿನ ಪರೀಕ್ಷೆಗೆ ರಕ್ತ ಸಂಗ್ರಹಿಸಿ ಕಳುಹಿಸಲಾಗಿದೆ. ಮಿಕ್ಕಂತೆ ಗ್ರಾಮದಲ್ಲಿ ಕಂಡು ಬಂದಿರುವ ಜ್ವರದ ಪ್ರಕರಣಗಳು, ಸಾಮಾನ್ಯವಾಗಿ ವಾತಾವರಣದಲ್ಲಿನ ತಾಪಮಾನದಿಂದಾಗಿ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಬಗ್ಗೆ ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಹೊಸಳ್ಳಿಯಲ್ಲಿ 50ಕ್ಕೂ ಹೆಚ್ಚು ಜನರಲ್ಲಿ ಜ್ವರ: ಆರೋಗ್ಯ ಇಲಾಖೆ ನಿರ್ಲಕ್ಷ್ಯ ಆರೋಪ