ಕೊಪ್ಪಳ:ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹನುಮೇಶ ನಾಯಕ ಹಾಗೂ ಆತನ ಕುಟುಂಬದವರಿಂದ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಪೊಲೀಸರು ರಕ್ಷಣೆ ನೀಡಬೇಕು ಎಂದು ಜಿಲ್ಲೆಯ ಹುಲಿಹೈದರ ಗ್ರಾಮದ ಮಂಜುನಾಥ್ ನಾಯಕ್ ಮನವಿ ಮಾಡಿದ್ದಾರೆ.
ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯನ ಮೇಲೆ ರೌಡಿಸಂ ಆರೋಪ: ಪೊಲೀಸ್ ರಕ್ಷಣೆಗೆ ಮನವಿ - ಹುಲಿಹೈದರ ಗ್ರಾಮ
ಕೊಪ್ಪಳ ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯರೊಬ್ಬರು ಕುಟುಂಬವೊದಕ್ಕೆ ಜೀವ ಬೆದರಿಕೆ ಹಾಕಿದ್ದು, ನಮಗೆ ಪೊಲೀಸ್ ರಕ್ಷಣೆ ಬೇಕೆಂದು ಕುಟುಂಬ ಸದಸ್ಯರೊಬ್ಬರು ಕೇಳಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್, ಇದೇ ಆಗಸ್ಟ್ 25 ರಂದು ತಮ್ಮ ಅಕ್ಕನ ಕುಟುಂಬದ ಮೇಲೆ ದೌರ್ಜನ್ಯ ನಡೆದಿದೆ. ಯಲ್ಲಾಲಿಂಗನ ಕೊಲೆ ಪ್ರಕರಣದ ಆರೋಪಿಗಳಾಗಿರುವ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹನುಮೇಶ ನಾಯಕ, ಆತನ ಮಗ ಮಹಾಂತೇಶ ನಾಯಕ, ನರಸಿಂಹ ನಾಯಕ ವಿನಾಃಕಾರಣ ನಮ್ಮ ಕುಟುಂಬದವರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಹನುಮೇಶ ನಾಯಕ ಊರಿಗೆ ಬಂದಾಗಿನಿಂದ ಅಮಾಯಕರ ಮೇಲೆ ದೌರ್ಜನ್ಯ ಮಾಡೋದು ಹೆಚ್ಚಾಗಿದೆ. ಜೀವಬೆದರಿಕೆಯಿಂದಾಗಿ ನಮ್ಮ ಕುಟುಂಬದವರು ಊರು ಬಿಟ್ಟು ಹೋಗಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ದೂರು ದಾಖಲಿಸಲು ಹೋದರೆ ಕನಕಗಿರಿ ಠಾಣೆಯ ಪೊಲೀಸರು ಸತಾಯಿಸಿದ್ದಾರೆ ಎಂದು ಮಂಜುನಾಥ ಆರೋಪಿಸಿದ್ದಾರೆ.
ತಮಗೆ ಜೀವ ಬೆದರಿಕೆ ಇದ್ದು ರಕ್ಷಣೆ ನೀಡಬೇಕು ಹಾಗೂ ದೌರ್ಜನ್ಯ ಮಾಡುತ್ತಿರುವ ಹನುಮೇಶ ನಾಯಕ ಹಾಗೂ ಅವರ ಹಿಂಬಾಲಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥ ನಾಯಕ ಮನವಿ ಮಾಡಿಕೊಂಡರು.