ಕೊಪ್ಪಳ(ಗಂಗಾವತಿ) :ಮಕ್ಕಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಹಾಲುಗಲ್ಲದ ಕಂದಮ್ಮ, ಮುಗ್ಧವಾಗಿ ಮಾತನಾಡುವ, ತುಂಟಾಟದ ಮಕ್ಕಳು ಎಂಥಾ ಮನಸ್ಸಿನವರನ್ನಾದರೂ ಸೂಜಿಗಲ್ಲಿನಂತೆ ಸೆಳೆದು ಬಿಡುತ್ತವೆ.
ಆದರೆ, ಅಳುತ್ತಿದ್ದ ಮಗುವೊಂದು ಜಿಲ್ಲಾ ಪಂಚಾಯತ್ ಸಿಇಒ ಅವರ ಗಮನ ಸೆಳೆದಿದೆ. ಮಾತ್ರವಲ್ಲದೆ, ಅಧಿಕಾರಿ ಆ ಮಗುವನ್ನು ಎತ್ತಿ ಕೆಲಕಾಲ ಸಂತೈಸಿ ಅದರೊಂದಿಗೆ ಆಟವಾಡಿದ ಘಟನೆ ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಮದಲ್ಲಿ ನಡೆದಿದೆ.
ಅಳುತ್ತಿದ್ದ ಮಗು ಎತ್ತಿಕೊಂಡು ಸಂತೈಸಿದ ಸಿಇಒ ಫೌಜಿಯಾ ತರುನ್ನುಮ್.. ತಾಯಿ ಲಸಿಕೆ ಪಡೆಯಲು ನೆರವು.. ಚಿಕ್ಕಮಾದಿನಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ಲಸಿಕಾ ಶಿಬಿರದಲ್ಲಿ ಲಸಿಕೆ ಪಡೆಯಲು ಮಗುವಿನೊಂದಿಗೆ ಮಹಿಳೆಯೊಬ್ಬರು ಬಂದಿದ್ದರು. ಈ ವೇಳೆ ತಾಯಿಯಿಂದ ಕೆಳಕ್ಕೆ ಇಳಿಯದೆ ಮಗು ಅಳುತ್ತಿತ್ತು.
ಮಗುವಿನ ಗಮನ ಬೇರೆಡೆ ಸೆಳೆದ ಜಿಪಂ ಸಿಇಒ ಫೌಜೀಯಾ ತರುನ್ನುಮ್, ಅದೇ ಮಗುವನ್ನ ಎತ್ತಿ ಕೆಲಕಾಲ ಆಟವಾಡಿಸಿದರು. ಅಲ್ಲದೆ ತಾಯಿ ಲಸಿಕೆ ಪಡೆಯಲು ಸಹಕಾರ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಸಿಇಒ ಅವರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.