ಕೊಪ್ಪಳ: ಜಿಲ್ಲೆಯ ಸ್ಥಳೀಯ ನಾಯಕರ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಭಿನ್ನಮತ ಸ್ಫೋಟಗೊಂಡಿದೆ.
ಕಾಂಗ್ರೆಸ್-ಜೆಡಿಎಸ್ ನಡುವೆ ಭಿನ್ನಮತ ಸ್ಪೋಟ ಮೈತ್ರಿ ಅಭ್ಯರ್ಥಿಯ ಪರ ಪ್ರಚಾರ ಹಾಗೂ ಚುನಾವಣಾ ಸಭೆಗಳಲ್ಲಿ ಜೆಡಿಎಸ್ ಮುಖಂಡರನ್ನು ಮತ್ತು ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್. ಆರ್. ಶ್ರೀನಾಥ ಆರೋಪಿಸಿದ್ದಾರೆ. ಅಲ್ಲದೆ, ಬಸವರಾಜ ರಾಯರೆಡ್ಡಿ, ಶಿವರಾಜ ತಂಗಡಗಿ, ಇಕ್ಬಾಲ್ ಅನ್ಸಾರಿ ಸೇರಿದಂತೆ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ವಿರುದ್ಧ ಶ್ರೀನಾಥ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗೂ ಯಾವುದೇ ಜವಬ್ದಾರಿ ನೀಡಿಲ್ಲ, ಪ್ರಚಾರಕ್ಕೂ ಕರೆದಿಲ್ಲ. ಗಂಗಾವತಿಯಲ್ಲಿ ಸಮಾವೇಶ ಮಾಡಿದರೂ ಮಾಹಿತಿ ನೀಡಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಒಂದು ಲಕ್ಷದ 80 ಸಾವಿರ ಮತಗಳನ್ನು ಪಡೆದಿತ್ತು. ಈ ಬಾರಿ ಕೊಪ್ಪಳದಲ್ಲಿ ಜೆಡಿಎಸ್ ನಾಯಕರ ಕಡೆಗಣನೆಯಾಗಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆಯಾಗಲಿದೆ ಎಂದು ಶ್ರೀನಾಥ್ ತಿಳಿಸಿದರು.
ನಾವು ನಮ್ಮ ಮೈತ್ರಿ ಧರ್ಮ ಪಾಲಿಸುತ್ತಿದ್ದೇವೆ. ನಮ್ಮ ಪಕ್ಷದ ಅಧ್ಯಕ್ಷರು ಮತ್ತು ಸಿಎಂ ಆದೇಶದಂತೆ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿದ್ದೇನೆ. ಆದ್ರೆ ಕಾಂಗ್ರೆಸ್ನವರೇ ನಮ್ಮನ್ನು ಪ್ರಚಾರಕ್ಕೆ ಕರೆದಿಲ್ಲ. ಆದರೂ ನಾನು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದೇನೆ ಎಂದು ಹೆಚ್. ಆರ್. ಶ್ರೀನಾಥ್ ಹೇಳಿದ್ದಾರೆ.