ಗಂಗಾವತಿ:ಹಿಂದೂಗಳ ಪವಿತ್ರ ಧಾರ್ಮಿಕ ತಾಣವಾಗಿರುವ ತಿರುಪತಿ ದೇವಸ್ಥಾನದ ಮಾದರಿಯಲ್ಲಿ ಗಂಗಾವತಿಯ ಅಂಜನಾದ್ರಿ ದೇಗುಲವನ್ನು ಅಭಿವೃದ್ಧಿ ಮಾಡುವ ಗುರಿ ಹಮ್ಮಿಕೊಳ್ಳುತ್ತಿದ್ದೇನೆ. ಅಲ್ಲದೇ ಸದಾ ಜನರೊಂದಿಗೆ ಇರಲು 'ನಿಮ್ಮೊಂದಿಗೆ ನಾನು' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇನೆ ಎಂದು ಗಂಗಾವತಿ ಶಾಸಕ ಜಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಚುನಾವಣೆಯ ಬಳಿಕ ಇದೇ ಮೊದಲ ಬಾರಿಗೆ ನಗರದ ಕನಕಗಿರಿ ರಸ್ತೆಯಲ್ಲಿ ಇರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಚೇರಿಯಲ್ಲಿ ಭಾನುವಾರ ಪಕ್ಷದ ನಾಯಕರು, ಕಾರ್ಯಕರ್ತರು, ಮತದಾರರಿಗೆ ಆಯೋಜಿಸಲಾಗಿದ್ದ ಅಭಿನಂದನಾ ಸಮರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾನು ಈ ಮೊದಲೇ ಅಂದರೆ ಚುನಾವಣೆಯ ಪೂರ್ವದಲ್ಲಿ ಹೇಳಿದಂತೆ ಅಂಜನಾದ್ರಿ ದೇವಸ್ಥಾನವನ್ನು ತಿರುಪತಿ ತಿಮ್ಮಪ್ಪನ ದೇವಸ್ಥಾನದ ಮಾದರಿಯಲ್ಲಿ ಅಭಿವೃದ್ಧಿ ಪಡಿಸುತ್ತೇನೆ. ಕ್ಷೇತ್ರದ ಜನರಿಗೆ ಡಬಲ್ ಬೆಡ್ ರೂಂ ಮನೆಗಳನ್ನು ಕಟ್ಟಿಸಿ ಕೊಡಲಾಗುತ್ತದೆ. ಗಂಗಾವತಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು.
ನಾಲ್ಕು ಕಡೆ ಕಚೇರಿ:ಜನ ಅನಗತ್ಯವಾಗಿ ಗಂಗಾವತಿಯ ನನ್ನ ಮನೆಗೆ ಬಂದು ಅಲೆದಾಡುವ ಬದಲಿಗೆ ಕ್ಷೇತ್ರದ ನಾಲ್ಕು ಕಡೆ ಕಚೇರಿ ಮತ್ತು ಮನೆಗಳನ್ನು ನಿರ್ಮಿಸಲಿದ್ದೇನೆ. ಜನ ಅಲ್ಲಿಗೆ ಬಂದು ತಮ್ಮ ಸಮಸ್ಯೆ ಹೇಳಿಕೊಂಡರೆ ಸಾಕು. ಅವುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಮುಖ್ಯವಾಗಿ ಗಂಗಾವತಿ ತಾಲೂಕಿನ ಇರಕಲಗಡಾ, ಕಿನ್ನಾಳ, ಆನೆಗೊಂದಿ ಹಾಗೂ ವೆಂಕಟಗಿರಿ ಗ್ರಾಮಗಳಲ್ಲಿ ಶಾಸಕರ ಕಚೇರಿಯನ್ನು ಆರಂಭಿಸುತ್ತೇನೆ. ಸರಕಾರದ ಕೆಲಸಕ್ಕೆ ಜನ ಪರದಾಡುವುದನ್ನು ತಪ್ಪಿಸಲು ಮತ್ತು ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಗಂಗಾವತಿ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ನಾಲ್ಕು ಕಡೆ ಶಾಸಕರ ಕಚೇರಿ ಆರಂಭಿಸಿದರೆ ಜನ ಪದೇ ಪದೆ ಸರಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ ಎಂಬ ಉದ್ದೇಶಕ್ಕೆ ನಾಲ್ಕು ಕಡೆ ಕಚೇರಿ ಆರಂಭಿಸಲಿದ್ದೇನೆ ಎಂದರು.