ಕುಷ್ಟಗಿ (ಕೊಪ್ಪಳ):ಕುಷ್ಟಗಿ ತಾಲೂಕಿನ ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೋರ್ವಳನ್ನು ದೇವದಾಸಿ ಪದ್ಧತಿಗೆ ದೂಡಲು ಯತ್ನಿಸುತ್ತಿರುವುದನ್ನು ತಹಶೀಲ್ದಾರ್ ಎಂ. ಸಿದ್ದೇಶ ನೇತೃತ್ವದ ಅಧಿಕಾರಿಗಳ ತಂಡ ತಡೆದಿದೆ.
ತಾವರಗೇರಾ ಮೂಲದ ಯುವತಿಯ ತಲೆಗೆ ಅವರ ಹೆತ್ತವರು ಸೇರಿದಂತೆ ಇತರರು ಮೌಢ್ಯದ ವಿಚಾರಗಳನ್ನು ತುಂಬಿದ್ದರು. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಮತ್ನಾಳ ಹೊರವಲಯದ ಕಂಟಿ ಕೆಂಚಮ್ಮದೇವಿಗೆ ಪೂಜಿಸುವ ನೆಪದಲ್ಲಿ ಯುವತಿಯನ್ನು ದೇವರಿಗೆ ಬಿಡಲು ಎಲ್ಲಾ ಸಿದ್ಧತೆಗಳು ನಡೆದಿದ್ದವು.
ಈ ಅನಿಷ್ಟ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಳೆದ ಸೋಮವಾರ ರಾತ್ರಿ ತಹಶೀಲ್ದಾರ್ ಎಂ. ಸಿದ್ದೇಶ, ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿಮಠ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಹಾಗೂ ಮುದಗಲ್ ಎಎಸ್ ಐ ಅವರ ತಂಡ ರಾಮತ್ನಾಳ ದೇವಿ ಗುಡಿಗೆ ದೌಡಾಯಿಸಿ ಮೌಢ್ಯತೆ ಬ್ರೇಕ್ ಹಾಕಿ, ಯುವತಿಯನ್ನು ರಕ್ಷಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಕೊಪ್ಪಳ ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಗೋಪಾಲ ನಾಯಕ್ ಅವರು ತಾವರಗೇರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಯುವತಿಯ ತಂದೆ-ತಾಯಿ, ಕರಿಯಪ್ಪ, ಯಮನವ್ವ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಹಾಗೂ ಅನಿಷ್ಟ ಪದ್ಧತಿಯನ್ನು ನಿಯಂತ್ರಿಸಲು ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ. ಸದ್ಯ ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ದೇವದಾಸಿ ಪದ್ಧತಿ ನಿರ್ಮೂಲನೆಗೆ ಹಲವು ಯೋಜನೆಗಳು ಜಾರಿಯಲ್ಲಿದ್ದರೂ ಕೂಡಾ ಈ ಪದ್ಧತಿ ಜೀವಂತವಾಗಿರುವುದಕ್ಕೆ ವಿಮುಕ್ತ ದೇವದಾಸಿ ಸಂಘಟನೆಯ ಸಂಚಾಲಕ ಚಂದಾಲಿಂಗಪ್ಪ ಕಲಕಬಂಡಿ, ಹುಸೇನಪ್ಪ ಮುದೇನೂರು, ಚಂದ್ರು ಕುಂಬಾರ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನು ತಡೆದ ಅಧಿಕಾರಿಗಳ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.