ಗಂಗಾವತಿ:ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದ್ದು, ಮಿಕ್ಕಂತೆ ನಾನಾ ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳು ಪ್ರಾಬಲ್ಯಕ್ಕಾಗಿ ಪೈಪೋಟಿಗೆ ಇಳಿದಿದ್ದಾರೆ. ವಿಜಯನಗರದ ಅರಸರ ಸಾಮಂತರಾಗಿದ್ದ ಕನಕಗಿರಿಯ ಪಾಳೇಗಾರರಿಂದ ನಿರ್ಮಾಣವಾಗಿರುವ ಕನಕಗಿರಿ ಪಟ್ಟಣವು ಐತಿಹಾಸಿಕ ಹಾಗೂ ಧಾರ್ಮಿಕ ಪರಂಪರೆಯ ಕ್ಷೇತ್ರಗಳನ್ನು ಒಳಗೊಂಡ ತಾಣವಾಗಿದೆ. ಕನಕಗಿರಿಯ ಕನಕಾಚಲನ ಸನ್ನಿಧಾನವೂ ಇಡೀ ಕ್ಷೇತ್ರದ ಜನರಿಗೆ ಆರಾಧ್ಯ ದೈವವಾಗಿದೆ.
ಇಲ್ಲಿನ ಕಲಾತ್ಮಕ ವೆಂಟಕಪ್ಪನ ಭಾವಿಗಳು, ಪುಷ್ಕರಣಿಗಳು, ವಿಜಯನಗರದ ಅರಸರ ಕಾಲದಲ್ಲಿ ನಿರ್ಮಾಣವಾಗಿರುವ ದೇಗುಲಗಳು ಜನರನ್ನು ಇನ್ನಿಲ್ಲದಂತೆ ಆಕರ್ಷಿಸುತ್ತಿವೆ. ಕೇವಲ ಕನಕಗಿರಿ ಪಟ್ಟಣವೊಂದರಲ್ಲಿಯೇ 501 ದೇಗುಲ, 501 ಬಾವಿಗಳಿದ್ದವು ಎಂಬ ಪ್ರತೀತಿ ಇದೆ. ಕಾಲಕ್ರಮೇಣ ಎಲ್ಲವೂ ನಶಿಸಿ ಹೋಗಿದೆ. ಮಳೆ ಆಶ್ರಿತ ಪ್ರದೇಶವಾಗಿರುವ ಕನಕಗಿರಿ ಕೇತ್ರದ ಶೇ.70ರಷ್ಟು ಭಾಗದ ಕೃಷಿ ಮಳೆಯನ್ನು ಅವಲಂಭಿಸಿದೆ. 2004ರಿಂದ ಈಚೆ ಈ ಕ್ಷೇತ್ರ ಅಭಿವೃದ್ಧಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಹೆಚ್ಚು ಗಮನ ಸೆಳೆದಿದೆ. ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣ, ಅಕ್ರಮ ಮರಳು ಗಣಿಗಾರಿಕೆಯ ಸಂದರ್ಭದಲ್ಲಿ ದಿಬ್ಬ ಕುಸಿದು ಮಕ್ಕಳು ಮೃತಪಟ್ಟ ಪ್ರಕರಣ, ಹುಲಿಹೈದರ ಪ್ರಕರಣದಲ್ಲಿ ಮೂವರು ಬಲಿ, ಪಿಎಸ್ಐ ಹಗರಣ ಹೀಗೆ ಸಾಲು-ಸಾಲು ಹಗರಣಗಳು ಕ್ಷೇತ್ರದ ವರ್ಚಸ್ಸನ್ನು ಕುಂದಿಸಿವೆ.
ಕನಕಗಿರಿ ವಿಧಾನಸಭಾ ಕ್ಷೇತ್ರದ ವಿವರ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಶಿವರಾಜ ತಂಗಡಗಿ ಅಖಾಡದಲ್ಲಿದ್ದರೆ, ಬಿಜೆಪಿಯಿಂದ ಹಾಲಿ ಶಾಸಕ ಬಸವರಾಜ ದಢೇಸ್ಗೂರು ಕಣದಲ್ಲಿದ್ದಾರೆ. ಮಿಕ್ಕಂತೆ ಜೆಡಿಎಸ್ ಪಕ್ಷದಿಂದ ರಾಜಗೋಪಾಲ, ಕೆಆರ್ಪಿಯಿಂದ ಯುವ ವೈದ್ಯ ಚಾರುಲ್ ದಾಸರಿ ಕಣದಲ್ಲಿದ್ದಾರೆ.
ಕನಕಗಿರಿ ವಿಧಾನಸಭಾ ಕ್ಷೇತ್ರವನ್ನು ಮೀಸಲು ಆಗುವವರೆಗೂ ಸ್ಥಳೀಯರೇ ಪ್ರತಿನಿಧಿಸುತ್ತಿದ್ದರು. 2008ರಲ್ಲಿ ಕ್ಷೇತ್ರ ಎಸ್ಸಿ ಮೀಸಲಾದ ಬಳಿಕದಿಂದ ಕೇವಲ ವಲಸಿಗರ ಪಾರುಪತ್ಯವೇ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದೆ. ಅದಕ್ಕೂ ಮುನ್ನ 5 ಬಾರಿ ಗಂಗಾವತಿ ಮೂಲದ ಮಲ್ಲಿಕಾರ್ಜುನ ನಾಗಪ್ಪ ಎರಡು ಬಾರಿ, ಶ್ರೀರಂಗದೇವರಾಯಲು ಎರಡು ಬಾರಿ, ಜಿ. ವೀರಪ್ಪ ಒಮ್ಮೆ ಇಲ್ಲಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಒಮ್ಮೆ ಮಾತ್ರ ಕನಕಗಿರಿ ಕ್ಷೇತ್ರದವರೇ ಆಗಿದ್ದ ಕಾರಟಗಿಯ ಸಾಲೋಣಿ ನಾಗಪ್ಪ ಆಯ್ಕೆಯಾಗಿ ಅದೇ ವರ್ಷದಲ್ಲಿ ಜೆ.ಹೆಚ್.ಪಟೇಲ್ ಅವರ ಸಚಿವ ಸಂಪುಟದಲ್ಲಿ ಮಂತ್ರಿಗಿರಿ ಪಡೆದುಕೊಂಡಿದ್ದರು. ಸಾಲೋಣಿ ನಾಗಪ್ಪ ಕೊಪ್ಪಳ ಜಿಲ್ಲೆಯ ಮೊದಲ ಉಸ್ತುವಾರಿ ಮಂತ್ರಿಯಾಗಿ ಸೇವೆ ನೀಡಿದ್ದಾರೆ. ಇಡೀ ಕೊಪ್ಪಳ ಜಿಲ್ಲೆಗೆ ಮೊದಲ ಉಸ್ತುವಾರಿ ಸಚಿವರನ್ನು ನೀಡಿದ ಶ್ರೇಯಸ್ಸು ಕನಕಗಿರಿ ವಿಧಾನಸಭಾ ಕ್ಷೇತ್ರದ್ದು.
1978ರಲ್ಲಿ ಕ್ಷೇತ್ರ ರಚನೆಯಾಗಿದ್ದು ಮೊದಲ ವರ್ಷವೇ 80 ಸಾವಿರ ಮತದಾರರಿದ್ದರು. ಈ ಪೈಕಿ ಚಲಾವಣೆಯಾಗಿದ್ದು ಮಾತ್ರ ಕೇವಲ 50 ಸಾವಿರ ಮತಗಳು. 1978ರಿಂದ 2018ರವರೆಗೆ ಒಟ್ಟು ಹತ್ತು ಚುನಾವಣೆ ಕಂಡಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಆರು ಜನ ಶಾಸಕರು ಆಯ್ಕೆಯಾಗಿದ್ದಾರೆ. ಈ ಪೈಕಿ ಮಲ್ಲಿಕಾರ್ಜುನ ನಾಗಪ್ಪ ಮೂರು ಬಾರಿ, ಶ್ರೀರಂಗದೇವರಾಯಲು ಎರಡು ಬಾರಿ, ಶಿವರಾಜ ತಂಗಡಗಿ ಒಂದು ಬಾರಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಮಿಕ್ಕಂತೆ ಜನತಾ ದಳದಿಂದ ಸಾಲೋಣಿ ನಾಗಪ್ಪ, ಪಕ್ಷೇತರರಾಗಿ ಶಿವರಾಜ ತಂಗಡಗಿ, ಬಿಜೆಪಿಯಿಂದ ಜಿ. ವೀರಪ್ಪ, ಹಾಲಿ ಶಾಸಕ ಬಸವರಾಜ ದಢೇಸ್ಗೂರು ತಲಾ ಒಮ್ಮೆ ಆಯ್ಕೆಯಾಗಿದ್ದಾರೆ.
ಯಾರು, ಯಾವಾಗ ಅಧಿಕಾರಕ್ಕೆ?:1978ರಲ್ಲಿ ಮಲ್ಲಿಕಾರ್ಜುನ ನಾಗಪ್ಪ ಕಾಂಗ್ರೆಸ್, 1983 ಮತ್ತು 1985ರಲ್ಲಿ ಶ್ರೀರಂಗದೇವರಾಯರಲು ಎರಡು ಬಾರಿ ಕಾಂಗ್ರೆಸ್ನಿಂದ, 1989ರಲ್ಲಿ ಮಲ್ಲಿಕಾರ್ಜುನ ನಾಗಪ್ಪ ಕಾಂಗ್ರೆಸ್, 1994ರಲ್ಲಿ ಸಾಲೋಣಿ ನಾಗಪ್ಪ ಜನತಾದಳದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1999ರಲ್ಲಿ ಮಲ್ಲಿಕಾರ್ಜುನ ನಾಗಪ್ಪ ಕಾಂಗ್ರೆಸ್, 2004ರಲ್ಲಿ ಜಿ. ವೀರಪ್ಪ ಬಿಜೆಪಿ, 2008ರಲ್ಲಿ ಶಿವರಾಜ ತಂಗಡಗಿ ಪಕ್ಷೇತರ, 2013ರಲ್ಲಿ ಶಿವರಾಜ ತಂಗಡಗಿ ಕಾಂಗ್ರೆಸ್ ಹಾಗೂ 2018ರಲ್ಲಿ ಬಸವರಾಜ ದಢೇಸ್ಗೂರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಶಿವರಾಜ ತಂಗಡಗಿ ಬಾಗಲಕೋಟೆ ಜಿಲ್ಲೆಯ ಇಲಕಲ್ ಮೂಲದವರಾದರೆ, ಹಾಲಿ ಬಿಜೆಪಿ ಶಾಸಕ ಬಸವರಾಜ ದಢೇಸ್ಗೂರು ರಾಯಚೂರು ಜಿಲ್ಲೆಯ ದಢೇಸ್ಗೂರಿನವರು. ಈ ಇಬ್ಬರು ಕಳೆದ 15 ವರ್ಷದಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಬಾಲದಂತೆ ಬೆಳೆಯುತ್ತಿರುವ ಅಕಾಂಕ್ಷಿಗಳು:2008ಕ್ಕಿಂತಲೂ ಮುಂಚೆ ಸ್ಪರ್ಧಾ ಕಣದಲ್ಲಿ ಕೇವಲ ನಾಲ್ಕರಿಂದ ಐದು ಜನ ನಾಮಪತ್ರ ಸಲ್ಲಿಸುತ್ತಿದ್ದರು. ಆದರೆ, 2008ರ ಬಳಿಕ ಮೀಸಲು ಕ್ಷೇತ್ರವಾದ ಬಳಿಕ ಕ್ಷೇತ್ರದಿಂದ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸುವವರ ಸಂಖ್ಯೆಯೂ ವಿಪರೀತವಾಗಿದೆ. 1978ರಲ್ಲಿ ನಾಲ್ಕು ಜನ, 1983ರಲ್ಲಿ ಮೂರು, 1985ರಲ್ಲಿ ಕೇವಲ ಇಬ್ಬರು, 1989 ನಾಲ್ಕು, 1994 ಎಂಟು, 1999ರಲ್ಲಿ ಏಳು ಜನ, 2004ರಲ್ಲಿ 13 ಜನ, 2008ರಲ್ಲಿ 20ಜನ, 2013ರಲ್ಲಿ 15, 2018ರ ಚುನಾವಣೆಯಲ್ಲಿ ಹನ್ನೊಂದು ಜನ ಸ್ಪರ್ಧಾ ಕಣದಲ್ಲಿದ್ದರು.
ಮಹಿಳೆಯರೇ ನಿರ್ಣಾಯಕ:ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 2023ರ ಜನವರಿ 1ಕ್ಕೆ ಇದ್ದಂತೆ ಒಟ್ಟು 2,19,853 ಮತದಾರರಿದ್ದಾರೆ. ಈ ಪೈಕಿ ಪುರುಷರು 1,08,499 ರಷ್ಟಿದ್ದರೆ, ಮಹಿಳೆಯರು 1,11,364 ರಷ್ಟಿದ್ದಾರೆ. ತೃತೀಯ ವರ್ಗದಲ್ಲಿ ಕೇವಲ 8 ಜನ ಇದ್ದಾರೆ. ಪುರುಷರಿಗೆ ಹೋಲಿಸಿದರೆ 2,847 ಜನ ಮಹಿಳೆಯರು ಹೆಚ್ಚಿದ್ದಾರೆ. 2011ರ ಜನಗಣತಿ ಪ್ರಕಾರ ಕನಕಗಿರಿ ಕ್ಷೇತ್ರದಲ್ಲಿ 995 ಪುರುಷರಿಗೆ ಒಂದು ಸಾವಿರ ಮಹಿಳೆಯರು ಇದ್ದಾರೆ. ಅಂದರೆ ಶೇ.0.05 ರಷ್ಟು ಮಹಿಳೆಯರ ಸಂಖ್ಯೆ ಕ್ಷೇತ್ರದಲ್ಲಿ ಹೆಚ್ಚಳವಿದೆ.
ಇದನ್ನೂ ಓದಿ:ರಾಜಕೀಯ ಜೀವನ ಆರಂಭಿಸಿದ ಅಂಬಾಸಿಡರ್ ಕಾರನ್ನ ಮತ್ತೊಮ್ಮೆ ಏರಿದ ಬಿಎಸ್ವೈ.. ಏನಿದರ ವಿಶೇಷತೆ?