ಕೊಪ್ಪಳ: ರಾಜ್ಯದಲ್ಲಿ ಈರುಳ್ಳಿ ಬೆಲೆ ಹೆಚ್ಚಾಗಿದ್ದರೂ ರೈತರಲ್ಲಿ ಸಂತಸ ಕಾಣುತ್ತಿಲ್ಲ. ಮಳೆ ಕೊರತೆಯಿಂದಾಗಿ ಗಡ್ಡೆಯಾಗುವ ಮೊದಲೇ ಈರುಳ್ಳಿ ಒಣಗಿ ನಿಂತಿದ್ದು, ರೈತರ ಕಣ್ಣಲ್ಲಿ ನೀರು ತರಿಸಿದೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ನೂರಾರು ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದರು. ಆದರೆ ಉತ್ತಮ ಬೆಳೆ ಬರುತ್ತದೆ ಎಂದು ಕನಸು ಕಂಡಿದ್ದ ರೈತರಿಗೆ ಇದೀಗ ಸಿಡಿಲು ಬಡಿದಂತಾಗಿದೆ.
ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿನದಿನಕ್ಕೆ ಏರುತ್ತಿದೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ಹಿಂಗಾರು ಕೂಡಾ ಸಮಯಕ್ಕೆ ಸರಿಯಾಗಿ ಬರದೇ ಈರುಳ್ಳಿ ಗಡ್ಡೆಯಾಗುವ ಸಮಯದಲ್ಲಿಯೇ, ನೀರಿನ ಕೊರತೆಯಿಂದ ಹಾಳಾಗುತ್ತಿದೆ. ಮಳೆಯಾಗಿದ್ದರೆ ಗಡ್ಡೆಗಳು ಉತ್ತವಾಗಿ ಆಗುತ್ತಿದ್ದವು. ಗಡ್ಡೆಯಾಗದ ಈರುಳ್ಳಿ ಬಳಕೆಗೆ ಬಾರದೇ ರೈತರು ಜಮೀನಿನಲ್ಲಿ ಹಾಗೆಯೇ ಬಿಟ್ಟಿದ್ದಾರೆ. ಇದೇ ಕಾರಣದಿಂದ ಮಾರುಕಟ್ಟೆಗೆ ಈರುಳ್ಳಿ ಆವಕ ಕಡಿಮೆಯಾಗಿದ್ದು ಬೆಲೆ ಹೆಚ್ಚಾಗುತ್ತಿದೆ.
ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಈರುಳ್ಳಿ ಬೆಲೆ 7 ಸಾವಿರ ರೂಪಾಯಿಗೂ ಹೆಚ್ಚಿದೆ. ಉತ್ತಮ ಫಸಲು ಬಂದಾಗ ಈ ಬೆಲೆ ಸಿಕ್ಕಿದ್ದರೆ ರೈತರಿಗೆ ಲಾಭವಾಗುತ್ತಿತ್ತು. ಆದರೆ ಬೆಲೆ ಹೆಚ್ಚಾಗಿದ್ದರೂ ಕೂಡಾ ರೈತರ ಬಳಿ ಈರುಳ್ಳಿ ಇಲ್ಲದೇ ಇರುವುದರಿಂದ ಲಾಭ ಸಿಗದಂತಾಗಿದೆ.