ಕೊಪ್ಪಳ : ಜಿಲ್ಲೆಯ ಪ್ರವಾಸದಲ್ಲಿರುವ ಉಪ ಲೋಕಾಯುಕ್ತ ನ್ಯಾ. ಕೆ. ಎನ್ ಫಣೀಂದ್ರ ಅವರು ಪೂರ್ವ ನಿಗದಿಯಂತೆ ಅ. 8 ರಂದು ಸಂಜೆ ವೇಳೆ ನಗರದ ವಿವಿಧ ಇಲಾಖೆಗಳ ವಸತಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಕೈಗೊಂಡರು. ಮೊದಲಿಗೆ ಡಾಲರ್ಸ್ ಕಾಲೋನಿ ಹತ್ತಿರದಲ್ಲಿನ ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದರು. ಅಲ್ಲಿನ ಅಡುಗೆ ಕೋಣೆ, ಆಹಾರ ದಾಸ್ತಾನು ಕೋಣೆ, ವಿದ್ಯಾರ್ಥಿಗಳ ವಸತಿ ಗೃಹಗಳಿಗೆ ಭೇಟಿ ನೀಡಿ ವಸತಿ ನಿಲಯದ ಅಧಿಕಾರಿಗಳು, ವಾರ್ಡನ್ಗಳು, ಅಡುಗೆದಾರರು ಮತ್ತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.
ವಸತಿ ನಿಲಯದಲ್ಲಿ ನಮಗೆ ಕುಡಿಯುವ ನೀರು ಸಮರ್ಪಕವಾಗಿ ಸಿಗುತ್ತಿಲ್ಲ, ವಸತಿ ನಿಲಯ ಇಕ್ಕಟ್ಟಾಗಿರುವುದರಿಂದ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿ, ಒಂದೇ ಕೋಣೆಯಲ್ಲಿ ಬಹಳಷ್ಟು ವಿದ್ಯಾರ್ಥಿನಿಯರನ್ನು ಹಾಕಿದ್ದರಿಂದಾಗಿ ನಮಗೆ ಅಭ್ಯಾಸ ಮಾಡಲು ತೊಂದರೆಯಾಗುತ್ತಿದೆ. ಓದಲು ವಸತಿ ನಿಲಯದಲ್ಲಿ ಸ್ಪರ್ಧಾತ್ಮಕ ಪುಸ್ತಕಗಳು ಇಲ್ಲ ಎಂದು ವಿದ್ಯಾರ್ಥಿನಿಯರು ಉಪ ಲೋಕಾಯುಕ್ತರ ಎದುರು ತಮ್ಮ ಅಳಲನ್ನು ತೋಡಿಕೊಂಡರು.
ತೀವ್ರ ಅಸಮಾಧಾನ: ವಸತಿ ನಿಲಯದಲ್ಲಿರುವ ಕೆಲವು ಅಡುಗೆದಾರರು ಸರಿಯಾಗಿ ಸ್ಪಂದಿಸುವುದಿಲ್ಲ. ಬಟ್ಟೆ ತೊಳೆಯುವ ಸ್ಥಳದಲ್ಲಿ ಗಲೀಜು ತುಂಬಿದೆ. ಕೆಲವು ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದರು. ವಸತಿ ನಿಲಯದ ಹೊರಾಂಗಣದಲ್ಲಿ ಸುತ್ತಲು ಅನೈರ್ಮಲ್ಯ ಕಂಡು ಉಪ ಲೋಕಾಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪೌರಾಯುಕ್ತರಿಗೆ ಸೂಚನೆ:ನಗರಸಭೆಯಿಂದ ಈ ಬಿಸಿಎಂ ವಸತಿ ನಿಲಯಕ್ಕೆ ಮತ್ತೊಂದು ಪೈಪ್ಲೈನ್ ಹಾಕಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಉಪ ಲೋಕಾಯುಕ್ತರು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.
ಯಾರು ಸಹ ಭೇಟಿ ನೀಡಿಲ್ಲ: ಕಿನ್ನಾಳ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಸಹ ಉಪ ಲೋಕಾಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಮಗೆ ಮಲಗಲು ಬೆಡ್ ವ್ಯವಸ್ಥೆ ಇಲ್ಲ. ಸ್ನಾನಕ್ಕೆ ಬಿಸಿ ನೀರು ಇಲ್ಲ, ಪುಸ್ತಕ ಇಲ್ಲ, ಸಾಂಬಾರು ನೀರಿನಂತಿರುತ್ತದೆ. ಎರಡು ವರ್ಷ ಆಯ್ತು ಯಾರು ಸಹ ವಸತಿ ನಿಲಯಕ್ಕೆ ಭೇಟಿ ನೀಡಿಲ್ಲ ಎಂದು ವಿದ್ಯಾರ್ಥಿಗಳು ಉಪ ಲೋಕಾಯುಕ್ತರ ಮುಂದೆ ಸಮಸ್ಯೆಗಳ ಪಟ್ಟಿಯನ್ನು ತೆರೆದಿಟ್ಟರು.