ಗಂಗಾವತಿ (ಕೊಪ್ಪಳ):ಕುಷ್ಟಗಿ ತಾಲೂಕು ಹಾಗೂ ಸುತ್ತಲಿನ ತಾಲೂಕುಗಳ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ 10 ಮಂದಿ ರೈತರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು 1800 ಕಿಲೋ ಮೀಟರ್ ಪಾದಯಾತ್ರೆ ಪ್ರಾರಂಭಿಸಿದ್ದಾರೆ.
ತಾಲ್ಲೂಕಿನ ಚಿಕ್ಕರಾಂಪೂರದಲ್ಲಿರುವ ಅಂಜನಾದ್ರಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೆಗಾ ಪಾದಯಾತ್ರೆ ಆರಂಭಿಸಿದ್ದಾರೆ. ಕುಷ್ಟಗಿ ತಾಲ್ಲೂಕಿನ ಹುಲಗೇರಿ ಗ್ರಾಮದ 10 ರೈತರು ಪಾದಯಾತ್ರೆಯ್ಲಿ ಪಾಲ್ಗೊಂಡಿದ್ದಾರೆ. ಅಗತ್ಯ ವಸ್ತುಗಳನ್ನು ಸಾಗಿಸಲು ಒಂದು ಟಂಟಂ ವಾಹನ ಇರಲಿದೆ. ರೈತರು ದಿನಕ್ಕೆ 25ರಿಂದ 30 ಕಿಮೀವರೆಗೆ ಪಾದಯಾತ್ರೆ ಮಾಡಲಿದ್ದಾರೆ. ಪಾದಯಾತ್ರೆ ಸಮಯದಲ್ಲಿ ಮಾರ್ಗ ಮಧ್ಯದಲ್ಲಿ ಸುರಕ್ಷಿತ ಸ್ಥಳದಲ್ಲಿ ತಂಗಿ ಮತ್ತೆ ಪ್ರಯಾಣ ಮುಂದುವರೆಸಲಿದ್ದಾರೆ. ಸುಮಾರು ಎರಡುವರೆಯಿಂದ ಮೂರು ತಿಂಗಳು ಕಾಲ ಈ ಪಾದಯಾತ್ರೆ ಜರುಗಲಿದ್ದು, ದೆಹಲಿ ತಲುಪಿದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿಸುವ ಬಗ್ಗೆ ಸಂಸದರೊಬ್ಬರು ಭರವಸೆ ನೀಡಿದ್ದಾರೆ ಎಂದು ರೈತರು ಹೇಳಿದ್ದಾರೆ.
ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯ ಕುಷ್ಟಗಿ, ಯಲಬುರ್ಗಾ, ಗಜೇಂದ್ರಗಡ ಸೇರಿದಂತೆ ಕೊಪ್ಪಳ ಜಿಲ್ಲೆ ಮತ್ತು ರೋಣಾ ತಾಲ್ಲೂಕಿನ ಕೆಲ ಗ್ರಾಮಗಳ ಕೃಷಿ ಚಟುವಟಿಕೆಗೆ ನೀರಾವರಿ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಅಬ್ದುಲ್ ರಜಾಕ್ ತಿಳಿಸಿದ್ದಾರೆ.
ಪಾದಯಾತ್ರೆಗೆ ಆರ್ಥಿಕ ನೆರವು:ಮೂರು ತಿಂಗಳು ಕಾಲ ನಡೆಯುವ ಈ ಪಾದಯಾತ್ರೆಯಲ್ಲಿ ಹತ್ತು ರೈತರು ಕೊನೆಯವರೆಗೂ ಇರಲಿದ್ದಾರೆ. ಇದಕ್ಕಾಗಿ ದಿನದ ಮೂರು ಹೊತ್ತು ಆಹಾರ, ಕುಡಿಯುವ ನೀರು, ಚಹಾ, ಆರೋಗ್ಯ ಸೇರಿದಂತೆ ವಿವಿಧ ಅಗತ್ಯ ಸೌಲಭ್ಯಕ್ಕಾಗಿ ಹಣ ಬೇಕಾಗುತ್ತದೆ. ಹಾಸಿಗೆ, ಹೊದಿಕೆ, ಬಟ್ಟೆ, ಆಹಾರ ಧಾನ್ಯಗಳನ್ನು ಸಾಗಿಸಲು ಒಂದು ವಾಹನ ಬಾಡಿಗೆ ಪಡೆದುಕೊಂಡಿದ್ದಾರೆ. ಇದಕ್ಕಾಗಿ ಕೆಲವರು ನಗದು ನೆರವು ಒದಗಿಸಿದರೆ, ಇನ್ನೂ ಕೆಲವರು ಆಹಾರ ಧಾನ್ಯ, ಸಿಲಿಂಡರ್ ಸೇರಿದಂತೆ ವಸ್ತುಗಳ ರೂಪದಲ್ಲಿ ದೇಣಿಗೆ ನೀಡಿದ್ದಾರೆ.
ಪ್ರಧಾನಿ ಭೇಟಿಗಾಗಿ ರೈತರಿಂದ 1,800 ಕಿಮೀ ಪಾದಯಾತ್ರೆ ಕುಷ್ಟಗಿಯ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಐವತ್ತು ಸಾವಿರ ರೂ., ಮಾಜಿ ಶಾಸಕ ಹಸನಸಾಬ ದೋಟಿಹಾಳ ಅವರ ಪುತ್ರ ಲಾಡನ್ಮಶಾಕ್ ಸಾಬ್ 25 ಸಾವಿರ ರೂ. ಸೇರಿದಂತೆ ಹಲವರು ನಗದು ದೇಣಿಗೆ ನೀಡಿದ್ದಾರೆ. ಕುಷ್ಟಗಿ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ್ ವಾಹನದ ವೆಚ್ಚ ಭರಿಸುತ್ತಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಹಣವನ್ನು ನಗದು ರೂಪದಲ್ಲಿ ಒಯ್ಯುತ್ತಿಲ್ಲ ಎಂದು ರೈತ ಅಬ್ದುಲ್ ರಜಾಕ್ ಹೇಳಿದ್ದಾರೆ.
ಪಾದಯಾತ್ರೆಯಲ್ಲಿ ಯಲಬುರ್ಗಾ ಹಾಗೂ ಕುಷ್ಟಗಿ ತಾಲ್ಲೂಕಿನ ಯಮನೂರ್, ಶಿವಾನಂದ, ಬಸವರಾಜ, ಮುಕ್ತುಂಸಾಬ, ಖಾಜೇಸಾಬ, ಮುರ್ತುಜಾಸಾಬ್, ಅಲ್ಲಾಸಾಬ್, ನಭೀಸಾಬ್ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಅಕ್ರಮ ಬಡಾವಣೆಗಳ ಬಗ್ಗೆ ಸಮಿತಿ ರಚಿಸಿ, ವರದಿ ಬಂದ ಬಳಿಕ ಸೂಕ್ತ ಕ್ರಮ: ಡಿಸಿಎಂ ಡಿಕೆಶಿ