ಗಂಗಾವತಿ(ಕೊಪ್ಪಳ): ಸಂಸದ ಕರಡಿ ಸಂಗಣ್ಣ ನೇತೃತ್ವದಲ್ಲಿ ತೆರಳಿದ್ದ ಕೊಪ್ಪಳ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳ ನಿಯೋಗ, ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಬೇಸಿಗೆಯ ಸಂದರ್ಭದಲ್ಲಿ ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿನ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದೆ. ಮುಂದಿನ ಬೇಸಿಗೆಯಲ್ಲಿ ಎರಡನೇ ಬೆಳೆ ಬೆಳೆಯುವ ರೈತರಿಗೆ ನೀರು ಪೂರೈಸಿ ಅನುಕೂಲ ಕಲ್ಪಿಸಬೇಕೆಂದು ಹಾಗೂ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಭದ್ರಾದಿಂದ ಆರು ಟಿಎಂಸಿ ನೀರು ತುಂಗಭದ್ರಾ ಜಲಾಶಯಕ್ಕೆ ಬಿಡಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಜಿಲ್ಲೆಯ ಜನಪ್ರತಿನಿಧಿಗಳು ಮನವಿ ಮಾಡಿದರು.
ಬೇಸಿಗೆ ಭತ್ತದ ಬೆಳೆಗೆ ನೀರು ಪೂರೈಕೆಗೆ ಮನವಿ :ಎರಡು ಮೂರು ವರ್ಷದಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಪ್ರತಿವರ್ಷ ಎರಡು ಬೆಳೆ ಬೆಳೆಯುತ್ತಿದ್ದಾರೆ. ಈ ಬಾರಿಯೂ ನೀರು ಪೂರೈಕೆಯ ನಿರೀಕ್ಷೆ ಇಟ್ಟುಕೊಂಡು, ಭತ್ತದ ನಾಟಿ ಮಾಡಲಾಗಿದೆ. ಮಾರ್ಚ್ ಅಂತ್ಯದವರೆಗೂ ಅಥವಾ ಏಪ್ರಿಲ್ ಮೊದಲ ವಾರದವರೆಗೂ ಭತ್ತದ ಬೆಳೆಗೆ ನೀರಿನ ಅಗತ್ಯವಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಭತ್ತದ ಬೆಳೆ ನಂಬಿಕೊಂಡಿದ್ದು,ಸಾಕಷ್ಟು ಖರ್ಚು ಮಾಡಿ ಈಗಾಗಲೇ ಭತ್ತದ ನಾಟಿ ಮಾಡಿದ್ದಾರೆ. ಅಕಸ್ಮತ್ತಾಗಿ ನೀರು ಪೂರೈಸದಿದ್ದರೆ,ಭತ್ತದ ಬೆಳೆ ನಾಶಗೊಂಡು ರೈತರು ತೊಂದರೆಗೆ ಸಿಲುಕುಬಹುದು. ಹಿಂದಿನ ಬಾರಿ ನೀರು ಪೂರೈಕೆ ಮಾಡಿದಂತೆ ಈ ಬಾರಿಯೂ ಭತ್ತದ ಬೆಳೆಗೆ ನೀರು ಪೂರೈಸಿ, ರೈತರನ್ನೂ ಬೇಸಿಗೆ ಕಾಲದ ಸಂಕಷ್ಟದಿಂದ ದೂರು ಮಾಡಬೇಕು ಎಂದು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ:ಕೊಪ್ಪಳ-ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯ ಜನರಿಗೆ ತುಂಗಭದ್ರಾ ಕಾಲುವೆಗಳ ಮೂಲಕ ಹರಿಯುವ ನೀರು ಕುಡಿಯುವ ಜಲದ ಮೂಲ ಆಧಾರವಾಗಿದೆ. ಸದ್ಯ ಜಲಾಶಯದಲ್ಲಿರುವ ನೀರು ಕುಡಿಯಲು ಮಾತ್ರ ಸಾಕಾಗುತ್ತದೆ. ಹೀಗಾಗಿ ಭದ್ರಾ ಜಲಾಶಯದಿಂದ ಕನಿಷ್ಠ ಆರು ಟಿ ಎಂ ಸಿ ನೀರು ಹರಿಸಿದರೆ ರೈತರ ಭತ್ತದ ಬೆಳೆ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಟ್ಟಂತಾಗುತ್ತದೆ ಎಂದು ಕೊಪ್ಪಳ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳ ನಿಯೋಗ ಸಿಎಂ ಅವರ ಗಮನಕ್ಕೆ ತಂದಿತು.