ಕೊಪ್ಪಳ : ತುಂಗಭದ್ರಾ ಜಲಾಶಯದಲ್ಲಿ ಸದ್ಯ 88 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಎಡದಂಡೆ ಮುಖ್ಯ ಕಾಲುವೆಗೆ ನವೆಂಬರ್ 30ರ ತನಕ 4,100 ಕ್ಯುಸೆಕ್ ನೀರು ಹರಿಸಲು ತುಂಗಭದ್ರಾ ಯೋಜನೆಯ 119ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. ಕೊಪ್ಪಳದ ಮುನಿರಾಬಾದ್ ಕಾಡಾ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ನೇತೃತ್ವದಲ್ಲಿ ಬುಧವಾರ ಸಭೆ ಜರುಗಿತು.
ನಂತರ ಮಾತನಾಡಿದ ಸಚಿವರು, ತುಂಗಭದ್ರಾ ಜಲಾಶಯದಲ್ಲಿ ಸದ್ಯ 88 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಇದರಲ್ಲಿ 65 ಟಿಎಂಸಿ ಅಡಿ ನೀರು ನಮ್ಮ ರಾಜ್ಯದ ಪಾಲಿಗೆ ಲಭಿಸಲಿದೆ. ಈಗಾಗಲೇ 10 ಟಿಎಂಸಿ ನೀರು ಬಳಕೆ ಮಾಡಿದ್ದು, ಆಂಧ್ರಕ್ಕೆ 3 ಟಿಎಂಸಿ ಅಡಿ ನೀರು ಹರಿಸಲಾಗಿದೆ. ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ನವೆಂಬರ್ 30 ವರೆಗೆ 1300 ಕ್ಯುಸೆಕ್, ಬಲದಂಡೆ ಕೆಳಮಟ್ಟದ ಕಾಲುವೆಗೆ ನವೆಂಬರ್ 30ರವರೆಗೆ 850 ಕ್ಯುಸೆಕ್, ರಾಯಬಸವ ಕಾಲುವೆಗೆ ನವೆಂಬರ್ 30ರವರೆಗೆ 270 ಕ್ಯುಸೆಕ್ ಮತ್ತು ಎಡದಂಡೆ ಮೇಲ್ಮಟ್ಟದ ಕಾಲುವೆಗೆ ನವೆಂಬರ್ 30ವರೆಗೆ 25 ಕ್ಯುಸೆಕ್ ನೀರು ಹರಿಸಲಾಗುವುದು. ಮುಂದೆ ನೀರಿನ ಲಭ್ಯತೆ ಆಧರಿಸಿ ನೀರು ಹರಿಸುವುದಾಗಿ ಸಚಿವ ತಂಗಡಗಿ ಮಾಹಿತಿ ನೀಡಿದರು.
ಆಗಸ್ಟ್ 19ರಂದು ಬೆಂಗಳೂರಿನಲ್ಲಿ ಮತ್ತೊಂದು ಸಭೆ : ಕಾರ್ಖಾನೆಗಳಿಗೆ ನೀರು ಹಂಚಿಕೆ ಹಾಗೂ ಗುತ್ತಿಗೆ ನೌಕರರ ಬಾಕಿ ವೇತನ ಪಾವತಿ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ಆಗಸ್ಟ್ 19ರಂದು ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಕಲಬುರಗಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ನಡೆಸಿ, ನೀರು ಕಳ್ಳತನ ಸೇರಿ ಇತರ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.