ಕೊಪ್ಪಳ: ಬಾಕಿ ವೇತನ ಪಾವತಿಸುವಂತೆ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಸಾಮಾಜಿಕ ಅರಣ್ಯ ಕೊಪ್ಪಳ ವಿಭಾಗದಲ್ಲಿ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕೆಲಸಗಾರರು ಅನಿರ್ದಿಷ್ಟಾವಧಿ ಧರಣಿ ಕುಳಿತಿದ್ದಾರೆ.
ನಗರದ ಜಿಲ್ಲಾಡಳಿತ ಭವನದ ಮುಂದೆ ಧರಣಿ ಕುಳಿತಿರುವ ದಿನಗೂಲಿ ಆಧಾರಿತ ಕೆಲಸಗಾರರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ದಿನಗೂಲಿ ಕೆಲಸಗಾರರು ಸಾಮಾಜಿಕ ಅರಣ್ಯ ಕೊಪ್ಪಳ ವಿಭಾಗದಲ್ಲಿ ನೆಡುತೋಪು ಕಾವಲುಗಾರರಾಗಿ ಕೆಲಸ ನಿರ್ವಹಿಸುತ್ತಿರುವ ಕೆಲಸಗಾರರಿಗೆ ಇಲಾಖೆಯ ಅನುದಾನದಲ್ಲಿಯೇ ವೇತನ ಪಾವತಿಸಬೇಕು. ಆದರೆ ಈಗ ಕಳೆದ ಸುಮಾರು 5 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ಆರೋಪಿಸಿದರು.
ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ವೇತನ ನೀಡಲಾಗುತ್ತಿದೆ. ಆದರೆ ಕನಿಷ್ಠ ವೇತನ ನಮಗೆ ಸಿಗುತ್ತಿಲ್ಲ. ಜಿಲ್ಲಾ ಪಂಚಾಯತ್ ನ ಸಾಮಾಜಿಕ ಅರಣ್ಯ ಯೋಜನೆಯ ಕಾರ್ಯಕ್ರಮದಡಿ ನೆಡುತೋಪು ಕಾಮಗಾರಿ ನಿರ್ವಹಣೆಗಾಗಿ ಹಾಗೂ ನೆಡುತೋಪು ಮಾಲಿಗಳ ವೇತನ ವೆಚ್ಚಕ್ಕಾಗಿ ಸರ್ಕಾರ ಒಂದನೇ ಮತ್ತು ಎರಡನೇ ಕಂತಿನಲ್ಲಿ ಒಟ್ಟು 119.68 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಆದರೆ ನಮಗೆ ಇದರಲ್ಲಿ ವೇತನ ಪಾವತಿ ಮಾಡಿಲ್ಲ ಎಂದು ದೂರಿದರು.
ಕಾರ್ಮಿಕರ ಕಾಯ್ದೆಯಂತೆ ಪ್ರತಿಯೊಬ್ಬ ಕಾರ್ಮಿಕರಿಗೂ ಸಮವಸ್ತ್ರ, ಗುರುತಿನ ಚೀಟಿ, ಇಎಸ್ಐ, ಪಿಎಫ್ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.