ಕರ್ನಾಟಕ

karnataka

ETV Bharat / state

ಹೂ ಮಾರುವ ಬಡವನ ಪುತ್ರಿ ಪಿಎಸ್ಐ ; ಕೊಪ್ಪಳದ ಫರೀದಾ ಯುವ ಮನಗಳಿಗೆ ಸ್ಫೂರ್ತಿ.. - Daughter of Flower selling PSI in koppal district

ತನ್ನೊಂದಿಗೆ ಹೂ ಕಟ್ಟಿ ಮಾರಾಟ ಮಾಡುತ್ತಿದ್ದ ಮಗಳು ದೊಡ್ಡ ಅಧಿಕಾರಿಯಾಗಿ ನೋಡಬೇಕೆಂಬ ಆಸೆಯನ್ನು ಸಣ್ಣ ಹೂ ವ್ಯಾಪಾರಿಯೊಬ್ಬರು ಈಡೇರಿಸಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕ ವಲಯದಲ್ಲಿ 17ನೇ ರ್ಯಾಂಕ್‌ ಪಡೆದು ಪಿಎಸ್ಐ ಆಗಿ ಆಯ್ಕೆಯಾಗಿರುವ ಫರೀದಾ ಬೇಗಂ ಇತರೆ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ..

Daughter of Flower selling PSI in koppal district
ಹೂ ಮಾರುವ ಬಡ ವ್ಯಕ್ತಿಯ ಪುತ್ರಿ ಪಿಎಸ್ಐಗೆ ಆಯ್ಕೆ; ಕೊಪ್ಪಳದ ಫರೀದಾ ಯುವತಿಯರಿಗೆ ಸ್ಫೂರ್ತಿ

By

Published : Jan 28, 2022, 8:03 PM IST

ಕೊಪ್ಪಳ :ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವ ಕೊಪ್ಪಳ ಜಿಲ್ಲೆಯಲ್ಲಿ ಸಾಧಿಸುವ ಛಲಗಾರರಿಗೇನು ಕಡಿಮೆ ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.

ಹೂ ಕಟ್ಟಿ ಮಾರಾಟ ಮಾಡುತ್ತಿದ್ದ ಯುವತಿಯೊಬ್ಬಳು ಬಡತನದ ಮಧ್ಯೆಯೂ ಛಲಬಿಡದೆ ಪಿಎಸ್ಐ ಆಗಿ ಆಯ್ಕೆಯಾಗುವ ಮೂಲಕ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಬಸ್ ನಿಲ್ದಾಣ ಬಳಿಯಲ್ಲಿ ಹೂವು ಮಾರಾಟ ಮಾಡುತ್ತಿದ್ದ ಮೌಲಾ ಹುಸೇನ ಪಟೇಲ್ ಎಂಬುವರ ಮಗಳು ಫರೀದಾ ಬೇಗಂ ಪಿಎಸ್ಐಗೆ ಆಯ್ಕೆಯಾಗಿದ್ದಾರೆ.

ಮೌಲಾಹುಸೇನ ಅವರದು ತುಂಬು ಕುಟುಂಬ. ಅವರಿಗೆ ಒಟ್ಟು 12 ಜನ ಮಕ್ಕಳು. ಅವರಲ್ಲಿ 5 ಜನ ಗಂಡು, 7 ಜನ ಹೆಣ್ಮಕ್ಕಳು. ಮನೆಯಲ್ಲಿ ಇಡೀ ಕುಟುಂಬ ಹೂವುಗಳನ್ನು ಕಟ್ಟುವ ಕೆಲಸ ಮಾಡುತ್ತಾರೆ. ಮೌಲಾಹುಸೇನರು ಅಂಗಡಿಯಲ್ಲಿ ಹೂವು ಮಾರಾಟ ಮಾಡುತ್ತಾರೆ.

ತಮ್ಮ ಕುಟುಂಬದಲ್ಲಿ ಮಕ್ಕಳು ಉತ್ತಮವಾಗಿ ಓದಿ ಉನ್ನತ ಹುದ್ದೆಯಲ್ಲಿರಬೇಕೆಂಬ ಆಸೆ ಮೌಲಾಹುಸೇನ ಅವರದ್ದಾಗಿತ್ತು. ಈ ಆಸೆಯನ್ನು 9ನೇ ಪುತ್ರಿ ಫರೀದಾ ಬೇಗಂ ಪೂರೈಸಿದ್ದಾರೆ. ಫರೀದಾ ಬಾಲ್ಯದಿಂದಲೇ ಓದಿನಲ್ಲಿ ಆಸಕ್ತಿ ಹಾಗೂ ಸಾಕಷ್ಟು ಭರವಸೆ ಮೂಡಿಸಿದ್ದಳು.

ಕುಕನೂರಿನ ವಿದ್ಯಾನಂದ ಗುರುಕುಲದಲ್ಲಿ ಓದಿರುವ ಈಕೆ ಐಎಎಸ್ ಮಾಡಬೇಕೆಂಬ ಆಸೆ. ಇದೇ ಕಾರಣಕ್ಕೆ ಪದವಿ ಮುಗಿಸಿದ ನಂತರ ಫರೀದಾ ಬೇಗಂ ಹೈದ್ರಾಬಾದ್‌ನಲ್ಲಿ ಐಎಎಸ್‌ಗೆ ತರಬೇತಿ ಪಡೆದು ಪರೀಕ್ಷೆ ಬರೆದಿದ್ದಾರೆ.

ಪುತ್ರಿಯ ಉನ್ನತ ಹುದ್ದೆ ಕಣ್ತುಂಬಿಕೊಳ್ಳುವ ಅದೃಷ್ಟ ತಂದೆಗಿಲ್ಲ..

ಆದರೆ, ಸ್ವಲ್ಪ ಅಂಕಗಳ ಅಂತರದಲ್ಲಿ ಐಎಎಸ್ ಪರೀಕ್ಷೆ ಪಾಸಾಗಲು ಆಗಿರಲಿಲ್ಲ. ಐಎಎಸ್‌ಗೆ ಓದನ್ನು ಮುಂದುವರಿಸಿರುವ ಇವರು ಇತ್ತೀಚಿಗೆ ಕೆಎಎಸ್ ಪರೀಕ್ಷೆ ಬರೆದಿದ್ದು, ಪ್ರಿಲಿಮಿನರ್‌ನಲ್ಲಿ ಪಾಸಾಗಿದ್ದಾರೆ. ಇಷ್ಟರಲ್ಲಿಯೇ ಮುಖ್ಯ ಪರೀಕ್ಷೆ ಎದುರಿಸಲಿದ್ದಾರೆ.

ಈ ಮಧ್ಯೆ ರಾಜ್ಯದಲ್ಲಿ 520 ಜನ ಪಿಎಸ್ಐಗಳ ನೇಮಕಾತಿಗಾಗಿ ನಡೆದ ಪರೀಕ್ಷೆಯಲ್ಲಿ ಫರೀದಾ ಬೇಗಂ ಕಲ್ಯಾಣ ಕರ್ನಾಟಕ ಭಾಗದಲ್ಲಿ 17ನೇ ರ್ಯಾಂಕ್ ಪಡೆದು ಆಯ್ಕೆಯಾಗಿದ್ದಾರೆ.

ಕುಟುಂಬದಲ್ಲಿ ಫರೀದಾ ಬೇಗಂ ಹಾಗೂ ಅವರ ಕಿರಿಯ ತಂಗಿ ಮಾತ್ರ ಪದವಿ ತರಗತಿಯವರೆಗೂ ಓದಿದ್ದಾರೆ. ಉಳಿದವರು ಹೆಚ್ಚು ಓದಿದವರಲ್ಲ. ಆದರೆ, ಓದಿನಲ್ಲಿ ಮುಂದೆ ಇರುವ ಫರೀದಾ ಅವರಿಗೆ ಕುಟುಂಬದವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಮೌಲಾಹುಸೇನ ಅವರು ಮಗಳನ್ನು ಓದಿಸಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ.

ತಂಗಿಯನ್ನೂ ಉನ್ನತ ಹುದ್ದೆಗೇರಿಸುವ ಕನಸು

ಪರೀಕ್ಷೆಯಲ್ಲಿ ಪಾಸ್ ಅಥವಾ ಫೇಲ್ ಮುಖ್ಯವಲ್ಲ. ಓದುವ ಜ್ಞಾನ, ಸಾಧನೆ ಮುಖ್ಯ ಎನ್ನುತ್ತಿದ್ದರು. ಆದರೆ, ಮೌಲಾಹುಸೇನ ಕಳೆದ 7 ತಿಂಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಮಗಳು ಉನ್ನತ ಹುದ್ದೆ ಹೊಂದುತ್ತಿರುವುದನ್ನು ನೋಡಲು ಅವರಿಲ್ಲ. ಆದರೆ, ತಂದೆಯ ಆಸೆಯನ್ನು ಪೂರೈಸುತ್ತೇನೆ ಎಂದು ಫರೀದಾ ಹೇಳುತ್ತಿದ್ದಾರೆ.

ತಂದೆ ಆಸೆಯಂತೆ ತಮ್ಮ ತಂಗಿ ಇನ್ನೂ ಹೆಚ್ಚಿನ ಹುದ್ದೆಗೇರಲು ಸಂಪೂರ್ಣ ಸಹಕಾರ ನೀಡುತ್ತೇವೆ ಎನ್ನುತ್ತಾರೆ ಫರೀದಾ ಅವರ ಅಣ್ಣ ಇಬ್ರಾಹಿಂ ಪಟೇಲ್. ಪಿಎಸ್ಐನಂತಹ ಹುದ್ದೆಗಳು ಸಾಮಾನ್ಯವಾಗಿ ಹಣವಂತರಿಗೆ ಎಂಬ ಮಾತು ಸುಳ್ಳು. ಪ್ರತಿಭೆ, ದೈಹಿಕ ಸಾಮಾರ್ಥ್ಯವಿದ್ದರೆ ಯಾರು ಬೇಕಾದರೂ ಪಿಎಸ್ಐ ಆಗಬಹುದು ಎಂಬುವುದನ್ನು ಹೂವು ಕಟ್ಟುವ ಈ ಯುವತಿ ತೋರಿಸಿಕೊಟ್ಟಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details