ಕುಷ್ಟಗಿ (ಕೊಪ್ಪಳ) : ತಾಲೂಕಿನ ಮುದೇನೂರು- ಬನ್ನಟ್ಟಿ ಗ್ರಾಮಗಳ ನಡುವಿನ ಹಳ್ಳದ ತಾತ್ಕಾಲಿಕ ಸೇತುವೆ ಕಳೆದ ರಾತ್ರಿ ಸುರಿದ ಮಳೆಗೆ ಮತ್ತೆ ಕೊಚ್ಚಿ ಹೋಗಿದ್ದು, ಸಂಚಾರ ಕಡಿತಗೊಂಡಿದೆ.
ಮತ್ತೆ ಕೊಚ್ಚಿ ಹೋದ ಮುದೇನೂರು ಹಳ್ಳದ ತಾತ್ಕಾಲಿಕ ಸೇತುವೆ - Rain in Kushtagi
ವಾರದ ಹಿಂದೆ ಮಳೆ ನೀರು ಪಾಲಾಗಿದ್ದ ಕುಷ್ಟಗಿ ತಾಲೂಕು ಮುದೇನೂರು ಗ್ರಾಮದ ತಾತ್ಕಾಲಿಕ ಸೇತುವೆ, ನಿನ್ನೆ ರಾತ್ರಿ ಸುರಿದ ಮಳೆಗೆ ಮತ್ತೆ ಕೊಚ್ಚಿ ಹೋಗಿದೆ.
ವಾರದ ಹಿಂದೆ ಪ್ರವಾಹಕ್ಕೆ ಹಾಳಾಗಿದ್ದ ಈ ತಾತ್ಕಾಲಿಕ ಸೇತುವೆಯನ್ನು ಕಳೆದ ಸೋಮವಾರ ಗುತ್ತಿಗೆದಾರರು ಮಣ್ಣು ಹಾಕಿ ದುರಸ್ಥಿ ಮಾಡಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಆದರೆ, ನಿನ್ನೆ ರಾತ್ರಿ ಸುರಿದ ಮಳೆಗೆ ಸೇತುವೆಗೆ ಹಾಕಿದ್ದ ಮಣ್ಣು ಮಾಯವಾಗಿದೆ. ಮಳೆಗೆ ಸೇತುವೆ ಪದೇ ಪದೆ ಕೊಚ್ಚಿ ಹೋಗುತ್ತಿರುವುದು ಗ್ರಾಮಸ್ಥರಿಗೆ ತಲೆನೋವು ತಂದಿದೆ. ಸುತ್ತಮುತ್ತಲಿನ ಬೈಕ್ ಸವಾರರು ಸುತ್ತುವರಿದು ಸಂಚರಿಸಲಾಗದೆ ಹಳ್ಳದಲ್ಲಿ ಬೈಕ್ ಹೊತ್ತು ಸಾಗುತ್ತಿದ್ದಾರೆ.
ಇನ್ನೂ ಕೆಲ ದಿನ ಮಳೆ ಮುಂದುವರೆಯುವ ಸಾಧ್ಯತೆಯಿರುವುದರಿಂದ ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ. ಹಳ್ಳದ ಪ್ರವಾಹಕ್ಕೆ ತಾತ್ಕಾಲಿಕ ಸೇತುವೆ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಮಳೆಗಾಲ ಕಳೆದ ಮೇಲಾದರು ತ್ವರಿತವಾಗಿ ಶಾಶ್ವತ ಸೇತುವೆ ನಿರ್ಮಿಸಿಕೊಡಬೇಕೆಂದು ಗ್ರಾಮದ ತಿರುಪತಿ ಎಲಿಗಾರ ಆಗ್ರಹಿಸಿದ್ದಾರೆ.