ಕೊಪ್ಪಳ:ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್ಡೌನ್ ಪರಿಣಾಮ ಅನೇಕ ಕ್ಷೇತ್ರಗಳ ಮೇಲೆ ಆಗಿದೆ. ಲಾಕ್ಡೌನ್ನಿಂದಾಗಿ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿರುವ ಪ್ರಸಿದ್ದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಈ ಬಾರಿ ಕೋಟ್ಯಂತರ ರೂಪಾಯಿ ಆದಾಯ ಖೋತಾ ಆಗಿದೆ.
ಕೊರೊನಾ ಸೋಂಕು ಹರಡುವ ಭೀತಿಯಿಂದ ರಾಜ್ಯ ಸರ್ಕಾರ ಧಾರ್ಮಿಕ ಕ್ಷೇತ್ರಗಳನ್ನು ಬಂದ್ ಮಾಡಿಸಿದೆ. ಲಾಕ್ಡೌನ್ ಸಡಿಲಿಕೆಯಾಗಿದ್ದರೂ ದೇವಸ್ಥಾನಗಳು ಭಕ್ತರ ದರ್ಶನಕ್ಕೆ ಇನ್ನೂ ಮುಕ್ತವಾಗಿಲ್ಲ.
ಹೀಗಾಗಿ ಅನೇಕ ಧಾರ್ಮಿಕ ಸ್ಥಳಗಳು ಆದಾಯವೂ ಕಡಿಮೆಯಾಗಿದೆ. ಅದರಂತೆ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಆದಾಯ ಖೋತಾ ಆಗಿದೆ.
ಶ್ರೀ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿಯೂ ಭಕ್ತರಿದ್ದಾರೆ. ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆಯ ದಿನಗಳಂದು ಭಕ್ತರು ಹುಲಗಿಗೆ ಬಂದು ದೇವಿಯ ದರ್ಶನ ಪಡೆದುಕೊಂಡು ತೀರ್ಥ ಪ್ರಸಾದ ಸ್ವೀಕರಿಸಿ ಕಾಣಿಕೆಗಳನ್ನು ಸಲ್ಲಿಸಿ ತೆರಳುತ್ತಿದ್ದರು.
ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಆದಾಯಕ್ಕೆ ಖೋತಾ ಕೊರೊನಾ ಸೋಂಕು ಭೀತಿ ಹಿನ್ನೆಲೆಯಿಂದ ಆದ ಲಾಕ್ಡೌನ್ನಿಂದ ಭಕ್ತರ ದರ್ಶವನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಭಕ್ತರಿಂದ ಸಂಗ್ರಹಣೆಯಾಗುತ್ತಿದ್ದ ಹುಂಡಿ, ದೇವಸ್ಥಾನದ ವಿವಿಧ ಮೂಲಗಳಿಂದ ಬರುತ್ತಿದ್ದ ಆದಾಯ ಖೋತಾ ಆಗಿದೆ. ಅದರಲ್ಲೂ ಈ ಜಾತ್ರೆಯ ಸಂದರ್ಭದಲ್ಲಿಯೇ ಲಾಕ್ಡೌನ್ ಆಗಿತ್ತು. ಹೀಗಾಗಿ ದೇವಸ್ಥಾನ ಈ ಬಾರಿ ಸುಮಾರು ಮೂರು ಕೋಟಿ ರುಪಾಯಿ ಆದಾಯ ಖೋತಾ ಆಗಿದೆ.
ದೇವಸ್ಥಾನಕ್ಕೆ ಪ್ರತಿ ತಿಂಗಳು ಒಂದು ಕೋಟಿ ರುಪಾಯಿ ಆದಾಯ ಬರುತ್ತಿತ್ತು. ಈ ಬಾರಿ ಜಾತ್ರೆಯ ಸಂದರ್ಭದಲ್ಲಿ ಲಾಕ್ಡೌನ್ ಆಗಿದ್ದರಿಂದ ಮತ್ತಷ್ಟು ಕಡಿಮೆಯಾಗಿದೆ. ಒಟ್ಟಾರೆಯಾಗಿ ಈ ಬಾರಿ ಲಾಕ್ಡೌನ್ನಿಂದ ದೇವಸ್ಥಾನ ಬಂದ್ ಆಗಿದ್ದರಿಂದ ಸುಮಾರು 3 ಕೋಟಿ ರುಪಾಯಿ ಆದಾಯ ಖೋತಾ ಆಗಿದೆ ಎಂದು ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಸುತಗಟ್ಟಿ ಹೇಳಿದ್ದಾರೆ.