ಕೊಪ್ಪಳ: ಜಿಲ್ಲೆಯಾದ್ಯಂತ ವಾಡಿಕೆಗಿಂತ ಭಾರಿ ಮಳೆಯಾಗಿದ್ದು, ಕೃಷಿಕರ ಬೆಳೆದ ಬೆಳೆಗಳು ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಇಂದು ಬೆಳಗಿನಜಾವ ಎಡಬಿಡದೆ ಸುರಿದ ಮಳೆಗೆ ಜಿಲ್ಲೆಯ ಬಹುತೇಕ ಕೃಷಿ ಭೂಮಿಗಳು ಜಲಾವೃತವಾಗಿವೆ. ಜೊತೆಗೆ ಹಲವು ಹಳ್ಳ, ಕೆರೆಗಳು ತುಂಬಿ ಗ್ರಾಮಗಳಿಗೆ ನೀರು ನುಗ್ಗಿದೆ.
ಕಟಾವು ಹಂತಕ್ಕೆ ಬಂದಿದ್ದ ಬೆಳೆಯೂ ಮಳೆಗೆ ನಾಶವಾಗಿದೆ. ಇದರಿಂದಾಗಿ ರೈತರು ಕಣ್ಣೀರು ಹಾಕುವಂತಾಗಿದೆ. ಕೊಪ್ಪಳ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಚೆಕ್ ಡ್ಯಾಂ ಭರ್ತಿಯಾಗಿದ್ದು, ಡ್ಯಾಂ ನೀರು ಹೊಲಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟು ಮಾಡಿದೆ. ಅಲ್ಲದೇ ಟಣಕನಕಲ್ಲಿ ಗ್ರಾಮದಿಂದ ಬರುವ ಹಳ್ಳವು ಸಹ ತುಂಬಿ ಹರಿಯುತ್ತಿದೆ. ಇದರಿಂದಾಗಿ ಹನುಮನಹಳ್ಳಿಯ ಸುಮಾರು 1 ಸಾವಿರ ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ ಸಂಪೂರ್ಣ ನಾಶವಾಗಿದೆ.