ಕರ್ನಾಟಕ

karnataka

ETV Bharat / state

ಕುಗ್ರಾಮವಾಗಿದ್ದ ಅಡವಿಹಳ್ಳಿಯ ಚಿತ್ರಣವನ್ನೇ ಬದಲಿಸಿದ್ರು ಗವಿಮಠ ಶ್ರೀಗಳು.. - koppala adavihalli village development

ಕುಕನೂರು ತಾಲೂಕಿನ ಅಡವಿಹಳ್ಳಿ ಗ್ರಾಮವನ್ನು ಅಭಿವೃದ್ಧಿಗೊಳಿಸುವಲ್ಲಿ ಗವಿಮಠದ ಶ್ರೀಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಸಂಘ ಸಂಸ್ಥೆಗಳ ಸಹಾಯದಿಂದ ಇಂದು ಗ್ರಾಮದ ಪ್ರತಿ ಮನೆಗೂ ಹಸುಗಳನ್ನು ಕೊಡಿಸಿ ಜನರು ತಮ್ಮ ಜೀವನಮಟ್ಟ ಸುಧಾರಿಸಿಕೊಳ್ಳುವಲ್ಲಿ ನೆರವಾಗಿದ್ದಾರೆ.

Cows to every house of koppala adavihalli village
ಅಡವಿಹಳ್ಳಿ ಗ್ರಾಮದ ಅಭಿವೃದ್ಧಿಗೆ ಗವಿಮಠ ಶ್ರೀಗಳ ಪ್ರಯತ್ನ

By

Published : Jan 13, 2022, 5:12 PM IST

ಕೊಪ್ಪಳ: ಕೆಲವು ತಿಂಗಳ ಹಿಂದೆ ಅಡವಿಹಳ್ಳಿ ಗ್ರಾಮ ಅಕ್ಷರಶಃ ಕುಗ್ರಾಮವಾಗಿತ್ತು. ಆದರೆ ಕೊಪ್ಪಳ ಗವಿಮಠದ ಶ್ರೀಗಳ ಕಾರ್ಯದಿಂದ ಈ ಗ್ರಾಮದ ಚಿತ್ರಣವೇ ಸಂಪೂರ್ಣ ಬದಲಾಗಿದೆ.

ಜಿಲ್ಲೆಯ ಕುಕನೂರು ತಾಲೂಕಿನ ಅಡವಿಹಳ್ಳಿ ಗ್ರಾಮ ಅಭಿವೃದ್ಧಿಗೊಳ್ಳುತ್ತಿದೆ.‌ ಇದಕ್ಕೆ ಕಾರಣ ಕೊಪ್ಪಳದ ಶ್ರೀಗಳು ಹಾಗೂ ಅವರಿಗೆ ಕೈಜೋಡಿಸಿದ ಹಲವಾರು ಸಂಘ ಸಂಸ್ಥೆಗಳು. ಕುಗ್ರಾಮ ಎನಿಸಿಕೊಂಡಿದ್ದ ಅಡವಿಹಳ್ಳಿಯನ್ನು ದತ್ತು ಪಡೆದು ಅದನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಕಳೆದ ಕೆಲವು ತಿಂಗಳ ಹಿಂದೆ ಗವಿಮಠದ ಶ್ರೀಗಳು ಚಾಲನೆ ನೀಡಿದ್ದರು.

ಪ್ರತಿ ಮನೆಗೂ ಹಸುಗಳು:

ಈ ಗ್ರಾಮದ ಜನರ ಸ್ವಾವಲಂಬಿ ಬದುಕಿಗೆ ಹಾಗೂ ಆರ್ಥಿಕ ಸ್ಥಿತಿ ಸುಧಾರಣೆಗೆ ಗವಿ ಶ್ರೀಗಳು ಹಸು ನೀಡಬೇಕು ಎಂದು ಯೋಚಿಸಿ ಇಂದು ಗ್ರಾಮದ ಪ್ರತಿ ಮನೆಗೂ ಗೋವುಗಳನ್ನು ಕೊಡಿಸಿದ್ದಾರೆ. ಕೊಪ್ಪಳದ ಸರ್ವೋದಯ ಸಂಸ್ಥೆ ಹಾಗೂ ಉದ್ಯಮಿ ಗೋಸಾಮಿ, ಕೊಪ್ಪಳ ಗವಿಮಠ ವತಿಯಿಂದ ಜರುಗುತ್ತಿರುವ ನಾನಾ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸಿ, ಶಿರೂರು ಹೊಸಹಾಡು ಸಿದ್ದಾಪುರದ ಶ್ರೀರಾಮಚಂದ್ರಪುರ ಮಠದಿಂದ 52 ಹಸುಗಳು ಹಾಗೂ ಕಲಬುರಗಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದವರಿಂದ 4 ಹಸುಗಳನ್ನು ವಿತರಣೆ ಮಾಡಿದ್ದಾರೆ.

ಅಡವಿಹಳ್ಳಿ ಗ್ರಾಮದ ಅಭಿವೃದ್ಧಿಗೆ ಒತ್ತು - ಪ್ರತಿ ಮನೆಗೂ ಹಸುಗಳು

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ, ಅಡವಿಹಳ್ಳಿ ಗ್ರಾಮ ಮೊದಲು ಕುಗ್ರಾಮದಂತಿತ್ತು. ವರ್ಷದೊಳಗೆ ಇಲ್ಲಿನ ರಸ್ತೆಗಳು ಬದಲಾಗಿವೆ. ಆದರೆ ಗ್ರಾಮದ ಜನರ ಮಸ್ತಕಗಳು ಬದಲಾಗಬೇಕಿದೆ. ದಾನಿಗಳು ಬಂದು ಕೊಡುತ್ತಾರೆಂದು ಎಲ್ಲವನ್ನು ತೆಗೆದುಕೊಂಡು ಮತ್ತೆ ಏನಾದರೂ ಗ್ರಾಮಕ್ಕೆ ಕೊಡುವ ಸಂದರ್ಭ ನಮ್ಮ ಹೆಸರು ಹೇಳಿ ಎಂದು ನನ್ನನ್ನು ಈ ಗ್ರಾಮಸ್ಥರು ಕೇಳಿದರೆ, ಅದು ಪರಿಪೂರ್ಣ ಜೀವನವಲ್ಲ. ಗುಡಿ ನಿರ್ಮಿಸಲು ಯಾರಿಗಾದರೂ ಹೇಳಿ ಎಂದು ಗ್ರಾಮಸ್ಥರು ಕೇಳಿದ್ದಾರೆ. ನೂರಾರು ಜನರಿರುವ ಅಡವಿಹಳ್ಳಿ ಜನರೇ ಕೂಡಿ ಕಟ್ಟಿದರೆ ಗುಡಿ ನಿರ್ಮಾಣ ಆಗುತ್ತದೆ. ಅದಕ್ಕೆ ದಾನಿಗಳು ಏಕೆ ಬೇಕು ಎಂದರು. ದಾನಿಗಳು ಮುಂದಕ್ಕೆ ಬಂದು ಹಸು ನೀಡಿದ್ದಾರೆ. ಅವುಗಳನ್ನು ಜೋಪಾನ ಮಾಡಿ ಜನ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ:ಸರ್ಕಾರಿ ಎಂಜಿನಿಯರಿಗ್, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಫ್ಯೂಚರ್ ಡಿಜಿಟಲ್ ಜಾಬ್ಸ್​​ಗೆ ಸಚಿವರಿಂದ ಚಾಲನೆ

ನಮ್ಮ ಗ್ರಾಮದ ಬಡವರಿಗೆ ಗೋವುಗಳನ್ನು ನೀಡಿದ್ದು ಕುಟುಂಬ ನಿರ್ವಹಣೆಗೆ ಸಹಕಾರಿಯಾಗುತ್ತಿದೆ. ನಮ್ಮ ಗ್ರಾಮದ ಈಗಿನ ಸ್ಥಿತಿ ಸಂಪೂರ್ಣ ಬದಲಾಗಿದೆ. ಈ ಕಾರ್ಯಕ್ಕೆ ಗವಿಮಠದ ಸ್ವಾಮೀಜಿಗಳ ಕಾರ್ಯ ಶ್ಲಾಘನೀಯ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ ಗ್ರಾಮಸ್ಥರು.

ABOUT THE AUTHOR

...view details