ಗಂಗಾವತಿ: ತಾಲೂಕಿನ ಆನೆಗೊಂದಿ ಸಮೀಪದ ದುರ್ಗಾಬೆಟ್ಟದಲ್ಲಿ ಚಿರತೆ ಹಾವಳಿ ಮುಂದುವರೆದಿದೆ. ಇದೀಗ ಹಸುವನ್ನು ಚಿರತೆ ಕೊಂದಾಕಿರುವುದು ಜನರ ನಿದ್ದೆಗೆಡಿಸಿದೆ.
ಚಿರತೆ ದಾಳಿಯಿಂದ ಬಿಡಿಸಿಕೊಳ್ಳಲು ಹೋರಾಟ ನಡೆಸಿದ ಆಕಳು ತೀವ್ರ ಗಾಯಗೊಂಡು ಸಾವನ್ನಪ್ಪಿದೆ. ಘಟನೆಯಿಂದಾಗಿ ದೇವಸ್ಥಾನದ ಸಿಬ್ಬಂದಿ ಹಾಗೂ ಸುತ್ತಲಿನ ಜನ ತೀವ್ರ ಆತಂಕಕ್ಕೊಳಗಾಗಿದ್ದಾರೆ. ಜನವಸತಿ ಪ್ರದೇಶದಲ್ಲಿ ನಿರಂತರವಾಗಿ ಕಂಡು ಬರುತ್ತಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ, ಕಳೆದ ಮೂರು ವಾರದಿಂದ ಶತಪ್ರಯತ್ನ ಮಾಡುತ್ತಿದ್ದರೂ ಕೂಡ ಯಾವುದೇ ಫಲ ಸಿಕ್ಕಿಲ್ಲ.